

ಕೃಷ್ಣಮೂರ್ತಿ ಪಿ.ಎಚ್ ಮಾಯಕೊಂಡ
ಮಳೆಯಾಶ್ರಿತ 30 ಎಕರೆ ಕೃಷಿ ಭೂಮಿಯಲ್ಲಿ ಬೋರ್ವೆಲ್ ನೀರಿನಲ್ಲಿ ಕೃಷಿ, ತೋಟಗಾರಿಕೆ ಸೇರಿ ಅನೇಕ ವೈವಿಧ್ಯಮಯ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿ ನಷ್ಟವಲ್ಲ, ಲಾಭದಾಯಕ ಎಂದು ತೋರಿಸಿಕೊಟ್ಟ ಯುವ ರೈತ ಸಹೋದರರ ಯಶೋಗಾಥೆ ಇದು.
ದಾವಣಗೆರೆ ಜಿಲ್ಲೆ ಹಾಗೂ ತಾಲೂಕಿನ ಗಡಿ ಅಂಚಿನ ಹುಚ್ಚವ್ವನಹಳ್ಳಿ ಗ್ರಾಮದ ಯುವ ರೈತ ಆರ್.ಸಿ. ಗಿರೀಶ್ ಮತ್ತು ಆರ್.ಸಿ. ಗಣೇಶ್ ಸಹೋದರರು ತಮ್ಮ 30 ಎಕರೆ ಕೃಷಿ ಭೂಮಿಯಲ್ಲಿ ಅಡಕೆ, ತೆಂಗು, ಮಾವು, ಕಾಳು ಮೆಣಸು ಇತರ ಬೆಳೆಗಳನ್ನು ಬೆಳೆದಿದ್ದು ಬಿರು ಬೇಸಿಗೆಯಲ್ಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
24 ಎಕರೆಯಲ್ಲಿ 13 ಸಾವಿರ ಅಡಕೆ ಮರಗಳು, 500 ತೆಂಗಿನ ಮರಗಳು, ಕಾಳುಮೆಣಸು ಮತ್ತು 6 ಎಕರೆಯಲ್ಲಿ 2 ಸಾವಿರ ಮಹಾಗನಿ ಗಿಡ, 2 ಸಾವಿರ ಶ್ರೀಗಂಧದ ಮರ, 50 ಮಾವಿನ ಮರ, 400 ತೇಗದ ಮರ, 20 ಪೇರಲ, 10 ಮರ ಸೇಬು, ಕಿತ್ತಳೆ, ಮೋಸಂಬಿ, ನೇರಳೆ, ಎಲೆ ಬಳ್ಳಿ, ಕಾಳು ಮೆಣಸಿನ ಬಳ್ಳಿ ಬೆಳೆಯಲಾಗಿದೆ. ಮನೆಯಲ್ಲಿ ಹಸು, ಎಮ್ಮೆಗಳನ್ನು ಸಾಕಿದ್ದರಿಂದ ಹಾಲು, ಮೊಸರು, ಬೆಣ್ಣೆ, ತುಪ್ಪಕ್ಕೆ ಬರ ಇಲ್ಲದಂತಾಗಿದೆ.
ತೋಟಗಳಿಗೆ ನೀರಿನ ಸೌಲಭ್ಯ: ತೋಟದೊಳಗೆ ಒಟ್ಟು 16 ಬೋರ್ವೆಲ್ಗಳಿದ್ದು ತೋಟದ ಮಧ್ಯೆ ವಿಶಾಲವಾದ ನೀರಿನ ತೊಟ್ಟಿ ಮಾಡಿಸಿದ್ದಾರೆ. ಎಲ್ಲ ಬೋರ್ವೆಲ್ಗಳ ನೀರನ್ನು ಮೊದಲು ತೊಟ್ಟಿಗೆ ತುಂಬಿಸಿ ನಂತರ ಬೆಳೆಗಳಿಗೆ ಹನಿ ನೀರಾವರಿ ಮೂಲಕ ತೋಟಕ್ಕೆ ಪೂರೈಸಲಾಗುತ್ತದೆ.
ವರ್ಷಕ್ಕೆ 85 ರಿಂದ 90 ಲಕ್ಷ ರೂ. ಆದಾಯ: ರಸಗೊಬ್ಬರ, ಔಷಧ, ಕೊಟ್ಟಿಗೆ ಗೊಬ್ಬರ, ಲಘು ಪೋಷಕಾಂಶಗಳ ಪೂರೈಕೆ ಮತ್ತು ಕಟಾವು ಸೇರಿ ವಾರ್ಷಿಕ 10 ಲಕ್ಷಕ್ಕಿಂತ ಹೆಚ್ಚು ಖರ್ಚು ಬರುತ್ತದೆ. ವಾರ್ಷಿಕ ಆದಾಯ 85 ರಿಂದ 90 ಲಕ್ಷ ರೂ ಬರುತ್ತದೆ ಎಂದು ಯುವ ರೈತ ಆರ್.ಸಿ. ಗಣೇಶ್ ತಿಳಿಸಿದ್ದಾರೆ.
ರೈತರು ಒಂದೇ ಬೆಳೆಗೆ ಸೀಮಿತವಾಗದೆ ಬಹು ಬೆಳೆ ಪದ್ಧತಿಯನ್ನು ಅನುಸರಿಸಿದಲ್ಲಿ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ತಂದು ಕೊಡುವ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢತೆ ಸಾಧಿಸಬಹುದು. ಕೃಷಿ ಲಾಭದಾಯಕ ಎಂದು ಹೇಳಬಹುದು. | ಆರ್.ಸಿ. ಗಣೇಶ್, ಪ್ರಗತಿಪರ ಯುವ ರೈತ ಮಕ್ಕಳಾದ ಗಿರೀಶ್, ಗಣೇಶ್ 30 ಎಕರೆ ಜಮೀನಿನಲ್ಲಿರುವ ಅಡಕೆ, ತೆಂಗು ಸೇರಿ ಹಲವು ಬೆಳೆಗಳನ್ನು ಬೆಳೆದು ಮಾದರಿ ಕೃಷಿಕರೆನಿಸಿಕೊಂಡಿದ್ದಾರೆ. ಎಲ್ಲ ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಕಡಿಮೆ ಖರ್ಚಿನಲ್ಲಿ ಲಾಭದಾಯಕ ಕೃಷಿ ಮಾಡಬಹುದು. | ಸುಲೋಚನಮ್ಮ ಚಂದ್ರಶೇಖರಪ್ಪ, ರೈತ ಮಹಿಳೆ ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕಡಿಮೆ ಭೂಮಿ ಇದ್ದರೂ ಸಮಗ್ರ ಕೃಷಿಯಲ್ಲಿ ತೊಡಗಿಕೊಂಡರೆ ಉತ್ತಮ ಪ್ರಗತಿ ಸಾಧಿಸಬಹುದು. | ಆರ್.ಸಿ. ಗಿರೀಶ್, ಪ್ರಗತಿಪರ ಯುವ ರೈತ.