

ಮಂಡ್ಯ: ಜಿಲ್ಲೆಯಲ್ಲಿ ರೈತರಿಗೆ ದೊಡ್ಡ ಸಮಸ್ಯೆಯಾಗಿರುವ ವಿದ್ಯುತ್ ಶಾರ್ಟ್ ಸಕ್ಯೂರ್ಟ್ ಆಗಿ ಬೆಳೆ ನಾಶವಾಗುತ್ತಿರುವ ಬಗ್ಗೆ ಅಧಿವೇಶನದಲ್ಲಿ ಶಾಸಕ ರವಿಕುಮಾರ್ ಗಣಿಗ ಪ್ರಸ್ತಾಪ ಮಾಡಿದ್ದಾರೆ. ಮಾತ್ರವಲ್ಲದೆ ಎರಡು ವರ್ಷದಿಂದ ಇಂತಹ ಪ್ರಕರಣ ನಡೆದರೂ ಪರಿಹಾರ ಸಿಕ್ಕಿಲ್ಲದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅಧಿವೇಶನದಲ್ಲಿ ಮಾತನಾಡಿದ ರವಿಕುಮಾರ್ ಗಣಿಗ, ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಎರಡು ವರ್ಷದಿಂದ ಬೆಳೆ ನಾಶಕ್ಕೆ ಸಂಬಂಧಿಸಿದಂತೆ ಸುಮಾರು 25 ಪ್ರಕರಣವಾಗಿದೆ. ಆದರೆ ಯಾರಿಗೂ ಪರಿಹಾರ ಸಿಕ್ಕಿಲ್ಲ. ಇದರಿಂದಾಗಿ ರೈತರು ಸೆಸ್ಕಾಂ ಕಚೇರಿಗೆ ಅಲೆದಾಡುವಂತಾಗಿದೆ. ಮೊದಲೇ ನಷ್ಟ ಅನುಭವಿಸಿರುವ ರೈತರು ಪರಿಹಾರಕ್ಕೂ ಪರದಾಡುವಂತಾಗಿದೆ. ಈ ಬಗ್ಗೆ ತುರ್ತು ಗಮನಹರಿಸುವುದರ ಜತೆಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು. ಇದಲ್ಲದೆ ಮಂಡ್ಯ ತಾಲೂಕು ಕೆರಗೋಡು, ಮರಿಲಿಂಗನದೊಡ್ಡಿ ಭಾಗದಲ್ಲಿ ವಿದ್ಯುತ್ ತಂತಿಗಳಿಂದ ಕಬ್ಬು ಬೆಳೆ ಹಾಳಾಗುತ್ತಿವೆ. ಇದರ ಬಗ್ಗೆ ಕ್ರಮ ವಹಿಸುವಂತೆ ಒತ್ತಾಯಿಸಿದರು.
ಇದಕ್ಕೆ ಲಿಖಿತ ಉತ್ತರ ನೀಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ಬೆಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಭೂ ಮಾಲೀಕರಿಂದ ಕೆಲ ದಾಖಲೆ ಪಡೆದುಕೊಳ್ಳಲಾಗುವುದು. ಇನ್ನು ವಿದ್ಯುತ್ ಅವಘಡ ಹಿನ್ನೆಲೆಯಲ್ಲಿ ಸರ್ಕಾರಿ/ಖಾಸಗಿ/ವಿಮಾ ಕಂಪನಿಯಿಂದ ಯಾವುದೇ ಪರಿಹಾರ ಪಡೆಯದಿರುವ ಬಗ್ಗೆ ದೃಢೀಕರಣ ಪತ್ರವನ್ನು ಸ್ಥಳೀಯ ಕಚೇರಿಗೆ ಒದಗಿಸಿದ್ದಲ್ಲಿ ದಾಖಲೆ ಪರಿಶೀಲಿಸಿ ಪರಿಹಾರದ ಮೊತ್ತವನ್ನು ಅಂದಾಜಿಸಿ ಸಂಬಂಧಪಟ್ಟವರಿಗೆ ಮಂಜೂರು ಮಾಡಲಾಗುವುದು ಎಂದಿದ್ದಾರೆ.
ಇದಲ್ಲದೆ ಜೋತು ಬಿದ್ದ ವಾಹಕ ಹಾಗೂ ಕಂಬಗಳ ಅಂತರ ಹೆಚ್ಚಾಗಿದ್ದಲ್ಲಿ ಮಧ್ಯಂತರ ಕಂಬಗಳನ್ನು ಅಳವಡಿಸಲು ಕ್ರಮ ವಹಿಸಲಾಗುವುದು. ಜತೆಗೆ ಒಂದು ಕಡೆ ವಾಲಿಕೊಂಡಿರುವ ಕಂಬಗಳನ್ನು ನೇರಗೊಳಿಸುವುದು. ವಿದ್ಯುತ್ ಮಾರ್ಗಕ್ಕೆ ತಗಲುವ/ಅಡ್ಡಲಾಗಿರುವ ಮರಗಳ ಕೊಂಬೆ ಕಟಾವು ಮಾಡುವುದು. ವಿದ್ಯುತ್ ಸಲಕರಣೆಗಳನ್ನು ಆಧ್ಯತೆ ಮೇರೆಗೆ ಬದಲಾಯಿಸಲಾಗುವುದು. ಅವಶ್ಯಕತೆ ಕಂಡುಬಂದಲ್ಲಿ ಹೆಚ್ಚುವರಿ ಪರಿವರ್ತಕ ಅಳವಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.