ಕಾಡಾನೆಗಳ ದಾಂಧಲೆಯಿಂದ ಬೆಳೆ ಧ್ವಂಸ

2.npk,-3
Published on

ನಾಪೋಕ್ಲು: ಸಮೀಪದ ಕೊಳಕೇರಿ ಗ್ರಾಮದ ಕೋಟೇರಿಯ ಬೊಮ್ಮಂಜಿಕೇರಿ ಹಾಗೂ ಕುಂಜಿಲ ಗ್ರಾಮದ ತೋಟಗಳಲ್ಲಿ ಬುಧವಾರ ರಾತ್ರಿ ಕಾಡಾನೆಗಳು ದಾಂಧಲೆ ನಡೆಸಿ ಕೃಷಿ ಗಿಡಗಳನ್ನು ಧ್ವಂಸ ಮಾಡಿ ಅಪಾರ ನಷ್ಟ ಉಂಟು ಮಾಡಿವೆ.

ಬೊಮ್ಮಂಜಕೇರಿ ಸುತ್ತಮುತ್ತಲಿನ ರೈತರ ತೋಟಗಳಿಗೆ ಕಾಡಾನೆಗಳ ಹಿಂಡು ದಾಂಧಲೆ ನಡೆಸಿ ತೆಂಗು, ಅಡಕೆ, ಕಾಫಿ ಗಿಡಗಳನ್ನು ನಾಶಪಡಿಸಿದ್ದು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದು ಮರಿಯಾನೆ ಸೇರಿದಂತೆ ಒಂಬತ್ತು ಕಾಡಾನೆಗಳು ಸುತ್ತಮುತ್ತ ಅಡ್ಡಾಡುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಕಾಡಿಗಟ್ಟಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಗ್ರಾಮದ ಅಚ್ಚಾಂಡಿರ, ಪುಲ್ಲೇರ, ಬಿದ್ದಾಟಂಡ, ಅಪ್ಪಾರಂಡ, ಅಚ್ಚಪಂಡ, ಮಲೆಯರ ಕುಟುಂಬಸ್ಥರ ತೋಟಗಳಲ್ಲಿ ಕಾಡಾನೆಗಳು ಕಳೆದ ಎರಡು ದಿನಗಳಿಂದ ಬೀಡು ಬಿಟ್ಟು ಅಪಾರ ಪ್ರಮಾಣದಲ್ಲಿ ಕಾಫಿ, ಬಾಳೆ, ಅಡಕೆ ಗಿಡಗಳನ್ನು ಧ್ವಂಸ ಮಾಡಿವೆ. ಅಲ್ಲದೆ ಕುಂಜಿಲ ಗ್ರಾಮದ ಸುಬ್ರಾಯ ಹೆಬ್ಬಾರ್, ಬೊಳ್ಳನಮಂಡ ಪೊನ್ನಪ್ಪ ಅವರ ತೋಟದಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿವೆ.

ಕಾಡಾನೆಗಳು ದಾಂದಲೆಯಿಂದ ಅಪಾರ ಪ್ರಮಾಣದಲ್ಲಿ ಕಾಫಿ,ಬಾಳೆ,ಅಡಿಕೆಗಿಡಗಳು.ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕೆಂದು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಪುಲ್ಲೇರ, ವಿನು, ಸೋಮಯ್ಯ, ಅಪ್ಪಾರಂಡ ಸರಿನಾ, ಅಚ್ಛಾಂಡಿರ ಅಪ್ಪಸ್ವಾಮಿ, ಗಣೇಶ, ರಾಜಮಣಿ, ಪ್ರಜ್ವಲ್, ಅಚ್ಛಾಂಡಿರ ಮಧು ಮಂದಣ್ಣ, ತಂಬಂಡ ಮುತ್ತಪ್ಪ, ರವಿ, ಮಲೆಯರ ಪೊನ್ನಪ್ಪ, ಅಪ್ಪಚ್ಚು , ತಂಬಂಡ ಶ್ಯಾಮ್, ಅಶೋಕ್, ಡಿಆರ್‌ಎಫ್‌ಒಗಳಾದ ಫಿರೋಜ್ ಖಾನ್, ದಿಲೀಪ್, ಕಾಳೇಗೌಡ, ಬೀಟ್ ಫಾರೆಸ್ಟ್ ಶರತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net