ಸತತ ಮಳೆಗೆ ಬೆಳೆ ನಾಶ ಕೃಷಿಕರು ಕಂಗಾಲು

1
Published on

ರೈತರಿಗೆ ಅಪಾರ ನಷ್ಟ | ಫಸಲು ಹಾನಿ ಪ್ರದೇಶಕ್ಕೆ ಬಾರದ ಅಧಿಕಾರಿ, ಜನಪ್ರತಿನಿಧಿಗಳು | ಕೈಗೆ ಬಂದ ತುತ್ತು ಬಾಯಿಗಿಲ್ಲದ ಸ್ಥಿತಿ

ವಿಜಯವಾಣಿ ಸುದ್ದಿಜಾಲ ಕುಣಿಗಲ್​

ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಹಿಂಗಾರು ಮಳೆಗೆ ಅಪಾರ ಪ್ರಮಾಣದ ವಾಣಿಜ್ಯ ಬೆಳೆಗಳು ಹಾಳಾಗುತ್ತಿರುವ ಜತೆಗೆ ಲಾಂತರ ರೂಪಾಯಿ ಬಂಡವಾಳದ ಹೂಡಿದ ರೈತರು ಇತ್ತ ಬೆಳೆಯು ಇಲ್ಲದೇ, ಅತ್ತ ಆದಾಯವು ಇಲ್ಲದೇ ಕಂಗಲಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೆತರು ಸಾಲ ಮಾಡಿ, ಬಡ್ಡಿಗೆ ಹಣ ತಂದು ಟೊಮ್ಯಾಟೊ, ಸೌತೆಕಾಯಿ, ಶುಂಠಿ, ಬದನೆಕಾಯಿ, ಚೆಂಡು ಹೂವು ಬೆಳೆದಿದ್ದ ರೈತರು ಕಟಾವಿಗೆ ಸಿದ್ಧತೆ ನಡೆಸಿದ್ದರು. ಬೆಳೆದು ನಿಂತಿದ್ದ ವಾಣಿಜ್ಯ ಬೆಳೆಯಿಂದ ಕೈ ತುಂಬಾ ಆದಾಯಗಳಿಸಬಹುದು ಎಂಬ ನಿರೀೆಯಲ್ಲಿದ್ದ ಕೃಷಿಕರಿಗೆ ಅನಿರೀತ ಕುಂಬದ್ರೋಣ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ.

30 ಎಕರೆ ಟೊಮ್ಯೊಟೊ ಬೆಳೆ ನಷ್ಟ: ತಾಲೂಕಿನ ತೆರೆದಕುಪ್ಪ ಗ್ರಾಪಂ ವ್ಯಾಪ್ತಿಯ ಗಿಡದಪಾಳ್ಯ ಗ್ರಾಮದ ನಂಜೇಗೌಡ ಅವರು ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮ್ಯೊಟೊ, ಎರಡು ಎಕರೆ ಜಮೀನಿನಲ್ಲಿ ಚೆಂಡು ಹೂ ಬೆಳೆ ಇಟ್ಟಿದರು. ಆದರೆ, ಕಳೆದ 10 ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಕಟಾವಿಗೆ ಬಂದ ಬೆಳೆಯು ನಾಶವಾಗಿದೆ. ಅದೇ ರೀತಿ ಕರೇಶಾನಯ್ಯನಪಾಳ್ಯ, ನರ್ಜುನಕುಪ್ಪೆ, ಕೊಪ್ಪಲು ಭಾರೆ, ಚಿಕ್ಕಮಲಳವಾಡಿ, ಗೊಲ್ಲರಹಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ರೈತರು 30 ಎಕರೆ ಜಮೀನಿನಲ್ಲಿ ಟೊಮ್ಯೊಟೊ ಬೆಳೆಯ ಜಮೀನಿಗೆ ನೀರು ನುಗ್ಗಿ ಬೆಳೆ ನಷ್ಟವಾಗಿದೆ. ಗಿಡದಪಾಳ್ಯ ಗ್ರಾಮದ ನಾಗರಾಜು ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೌತೆಕಾಯಿ ಬೆಳೆನೂ ನಾಶವಾಗಿದೆ. ತಾಲೂಕಿನ ಸುಂದರಕುಪ್ಪೆ ಗ್ರಾಮದಲ್ಲಿ ವೇದಮೂರ್ತಿ ಅವರು ಬೆಳೆದಿದ್ದ ಟೊಮ್ಯಾಟೊ ಸತತ ಮಳೆಗೆ ಜಮೀನಿನಲ್ಲಿ ನೀರು ನಿಂತಿದ್ದರಿಂದ ಗಿಡಗಳಿಗೆ ಎಲೆಚುಕ್ಕಿ ರೋಗ ತಗಲಿ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಜತೆಗೆ ಬದನೆ ಗಿಡಗಳು ಕೊಳೆತು ಅಪಾರ ನಷ್ಟು ಉಂಟಾಗಿದೆ. ತಾಲೂಕಿನ ನರ್ಜನಕುಪ್ಪೆ ಗ್ರಾಮದ ರೈತ ಯೋಗಾನಂದ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಶುಂಠಿ ನಷ್ಟವಾಗಿದೆ.

ಕಣ್ಣು ಮುಚ್ಚಿ ಕುಳಿತ ಆಡಳಿತ

ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಜೆಡಿಎಸ್​ ತಾಲೂಕು ಅಧ್ಯ ಬಿ.ಎನ್​.ಜಗದೀಶ್​, ವಿಪರೀತ ಮಳೆಯಿಂದ ತಾಲೂಕಿನಲ್ಲಿ ಅತಿವೃಷ್ಟಿಯಾಗಿದೆ.ರೈತರು ಸಾಕಷ್ಟು ವಾಣಿಜ್ಯ ಬೆಳೆ ಇಟ್ಟಿದ್ದಾರೆ. ಒಬ್ಬೊಬ್ಬ ರೆತರು ಮೂರರಿಂದ ನಾಲ್ಕು ಲ ರೂ. ಖರ್ಚು ಮಾಡಿದ್ದಾರೆ. ತಾಲೂಕಿನಲ್ಲಿ ಬೆಳೆದಂತಹ ಬೆಳೆಗಳು ರೆತರ ಕೈ ಸೇರುತ್ತಿಲ್ಲ, ಇದರಿಂದ ಸಂಪೂರ್ಣ ನಷ್ಟವಾಗಿದೆ. ಕೋಟ್ಯಂತರ ರೂ. ಹಣ ಕಳೆದುಕೊಂಡಿದ್ದಾರೆ. ಶೇ.35 ರಷ್ಟಕ್ಕಿಂತ ಅಧಿಕ ಬೆಳೆ ಹಾನಿಯಾದರೆ ಸರ್ಕಾರಿಂದ ಪರಿಹಾರ ಕೊಡಿಸುವ ವ್ಯವಸ್ಥೆ ಇದೆ. ಆದರೆ, ಜನಪ್ರತಿನಿಧಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ರೆತರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಿಲ್ಲ. ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದ್ದು, ದೇಶದ ಬೆನ್ನೆಲುಬು ಆಗಿರುವ ರೈತರ ಕಷ್ಟ ಕೇಳುವ ಕನಿಕರವು ಇಲ್ಲವಾಗಿದೆ. ಹೀಗೆ ಆದಲ್ಲಿ, ರೈತರ ಕಷ್ಟ ಕೇಳುವವರು ಯಾರು ಎಂದು ರೈತ ಮುಖಂಡರು ಪ್ರಶ್ನಿಸಿದರು.

ಬೆಳೆ ನಷ್ಟ ಸಂಬಂಧ ರಾಜಸ್ವ ನಿರೀಕ್ಷಕ ಮುರುಳಿ ಅವರ ಗಮನಕ್ಕೆ ತರಲಾಗಿದೆ. ಪರಿಹಾರ ನೀಡುವ ಸಂಬಂಧ ಮೇಲಧಿಕಾರಿಗಳಿಂದ ಯಾವುದೇ ಆದೇಶ ಬಂದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಕಳೆದ ವರ್ಷ ಮಳೆ ಇಲ್ಲದೆ ಬರಗಾಲ ಉಂಟಾಗಿ ಬೆಳೆ ನಷ್ಟವಾಗಿತ್ತು. ಆದರೆ, ಈ ಭಾರಿ ವಿಪರೀತ ಮಳೆಯಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಕಳೆದುಕೊಂಡಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. | ನಂಜೇಗೌಡ ಬೆಳೆ ಕಳೆದುಕೊಂಡ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net