

ನಾಪೋಕ್ಲು: ಸಮೀಪದ ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿ ಯವಕಪಾಡಿ ಗ್ರಾಮದ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ನಾಶಪಡಿಸಿವೆ.
ಸುರೇಶ್ ಮತ್ತು ಸರು ಅವರ ಮನೆಯಂಗಳಕ್ಕೆ ಬಂದು ಅಡ್ಡಾಡಿದ್ದಲ್ಲದೆ ಮನೆಯ ಸುತ್ತಮುತ್ತಲಿನ ತೋಟದಲ್ಲಿದ್ದ ಬಾಳೆ, ಕಾಫಿ ಗಿಡಗಳನ್ನು ನಾಶಪಡಿಸಿವೆ. ಗ್ರಾಮದ ಸುತ್ತಮುತ್ತಲ ಬೆಳೆಗಾರರ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಟ್ಟಿವೆ. ಹಲವು ಕಾರಣಗಳಿಂದ ಕೃಷಿಯಿಂದ ವಿಮುಖರಾಗುತ್ತಿರುವ ರೈತರಿಗೆ ಕಾಡಾನೆಗಳ ಉಪಟಳ ನುಂಗಲಾರದ ತುತ್ತಾಗಿದೆ. ಇದೀಗ ಭತ್ತದ ನಾಟಿ ಮುಗಿದಿದ್ದು, ಪೈರುಗಳು ನಾಶವಾದರೆ ರೈತರು ಭತ್ತದ ಕೃಷಿಯನ್ನೇ ಕೈಬಿಡುವ ಪರಿಸ್ಥಿತಿ ಎದುರಾಗಲಿದೆ. ಕಳೆದ ಇದೆ ಅವಧಿಯಲ್ಲಿ ಗದ್ದೆಗಳಿಗೆ ಕಾಡಾನೆ ದಾಳಿ ನಡೆಸಿದ್ದವು. ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳಿಂದಾಗಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಜೀವ ಹಾನಿ ಸಂಭವಿಸುವ ಮೊದಲು ಕೂಡಲೇ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಬೆಳೆಗಾರರರು ಒತ್ತಾಯಿಸಿದ್ದಾರೆ.