

ಹಾನಗಲ್ಲ: ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸ್ಮಶಾನ ಜಾಗೆಯಿಲ್ಲದ ಹಿನ್ನೆಲೆಯಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳ ಅಂತ್ಯಕ್ರಿಯೆಗೆ ಗ್ರಾಮಸ್ಥರು ಪರದಾಟ ನಡೆಸಿ ಕೊನೆಗೆ ಬೆಳೆದು ನಿಂತಿದ್ದ ಬೆಳೆಯನ್ನೇ ಕಟಾವ್ ಮಾಡಿ ಅಂತ್ಯಕ್ರಿಯೆ ನಡೆಸಿದ ಘಟನೆ ತಾಲೂಕಿನ ಉಪ್ಪುಣಸಿ ಗ್ರಾಮದಲ್ಲಿ ನಡೆದಿದೆ.
ಉಪ್ಪುಣಸಿ ಗ್ರಾಮದಲ್ಲಿ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದ ರುದ್ರಪ್ಪ ಸಿದ್ದಪ್ಪ ಕಾಡಪ್ಪನವರ(75), ಹಾಗೂ ಅನಾರೋಗ್ಯದಿಂದ ಸಾವನ್ನಪ್ಪಿದ್ದ ರಾಜನಗೌಡ ಸಿದ್ದವೀರಗೌಡ ಪಾಟೀಲ್(45) ಅವರುಗಳ ಅಂತ್ಯಕ್ರಿಯೆಗಾಗಿ ಗ್ರಾಮಸ್ಥರು ಸ್ಮಶಾನಭೂಮಿ ಇಲ್ಲದೇ ಪರದಾಡುವಂತಾಯಿತು. ಕೊನೆಗೆ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕಿದ ಗ್ರಾಮಸ್ಥರು, ಗ್ರಾಮಸ್ಥರು ಬೆಳೆದು ನಿಂತು ಕೊಯ್ಲಿಗೆ ಬಂದಿದ್ದ ಗೋವಿನಜೋಳದ ಬೆಳೆಯನ್ನು ಕಟಾವು ಮಾಡಿ ಆ ಸ್ಥಳದಲ್ಲಿ ಅಂತ್ಯಕ್ರಿಯೆ ಕೈಗೊಂಡ ಘಟನೆ ಜರುಗಿತು.
1 ಎಕರೆ ಸ್ಮಶಾನಭೂಮಿ ಒದಗಿಸುವಂತೆ ಗ್ರಾಮಸ್ಥರು ಕಳೆದ ವರ್ಷ ಆಗಷ್ಟನಲ್ಲಿಯೇ ಗ್ರಾಮ ಪಂಚಾಯತಿ ಹಾಗೂ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಉಪ್ಪುಣಸಿ ಗ್ರಾಮದ ಸರ್ವೆ ನಂ.19 ರಲ್ಲಿ ಒಂದು ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಅದನ್ನು ಜಿಲ್ಲಾಡಳಿತ, ತಾಲೂಕು ಆಡಳಿತ ಮಂಜೂರುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಕುರಿತಂತೆ ತಾಲೂಕು, ಜಿಲ್ಲಾಳಿತಗಳು ಯಾವುದೇ ಕ್ರಮ ಜರುಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮಸ್ಥರು ನೀಡಿದ ಮನವಿಗೆ ಸ್ಪಂದಿಸದ ಜಿಲ್ಲಾಡಳಿತದ ಮೇಲೆ ಗ್ರಾಮಸ್ಥರು ತೀವೃ ಆಕ್ರೋಶ ವ್ಯಕ್ತಪಡಿಸಿದ್ದು, ಇಂಥ ಅಸಹಾಯಕ ಸ್ಥಿತಿ ಯಾವುದೇ ಗ್ರಾಮಗಳವರಿಗೂ ಬರಬಾರದು. ಸಂಬಂಧಿಸಿದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮ ಹೊಲ-ಗದ್ದೆಗಳಲ್ಲಿ ಬೆಳೆ ಹಾಳು ಮಾಡಿಕೊಂಡು ನಮ್ಮವರ ಅಂತ್ಯಕ್ರಿಯೆ ನಡೆಸುವುದಾದರೆ, ಆಡಳಿತ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ನಮ್ಮ ಗ್ರಾಮದ ಸ್ಥಿತಿ ಉದಾಹರಣೆಯಾಗಿದೆ ಎಂದು ಮೃತರ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಉಪ್ಪುಣಸಿ ಗ್ರಾಮದ ರಿ.ಸ.ನಂ.20ರಲ್ಲಿ ಸ್ಮಶಾನಕ್ಕೆ ಜಾಗೆ ಗುರುತಿಸಲಾಗಿತ್ತು. ಅದರಲ್ಲಿ ಭೂ ಒತ್ತುವರಿ ಮತ್ತು ರಸ್ತೆ ಸಂಪರ್ಕವಿಲ್ಲ ಎಂಬ ಸಮಸ್ಯೆಗಳಿಂದಾಗಿ ಅಲ್ಲಿ ಗ್ರಾಮಸ್ಥರು ಅಂತ್ಯಕ್ರಿಯೆ ಕೈಗೊಳ್ಳುತ್ತಿಲ್ಲ. ಈಗ ಇದರ ಪಕ್ಕದಲ್ಲಿನ ರಿಸನಂ, 19ರಲ್ಲಿ ಸ್ಮಶಾನಕ್ಕೆ ಭೂಮಿ ಗುರುತಿಸಿ ಸವಣೂರು ಉಪವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಲೇ ಮಂಜೂರು ಮಾಡುವಂತೆ ಕೋರಲಾಗಿದ.ಎಸ್.ರೇಣುಕಮ್ಮ. ತಹಸೀಲ್ದಾರ, ಹಾನಗಲ್ಲ.