ಬೆಳೆ ಹಾನಿ ಪ್ರದೇಶಕ್ಕೆ ಸಚಿವರು ಭೇಟಿ ನೀಡಲಿ

Published on

ಲಿಂಗಸುಗೂರು: ಜಿಲ್ಲೆಯಲ್ಲಿ ಸತತ ಮಳೆಗೆ ಬೆಳೆ ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಈವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡದೆ ನಿರ್ಲಕ್ಷೃವಹಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ ಆರೋಪಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮನೆಗಳು ಬಿದ್ದಿವೆ. ತೊಗರಿ, ಹತ್ತಿ ಬೆಳೆಗಳು ಹಾಳಾಗಿವೆ. ನಷ್ಟಕ್ಕೀಡಾದ ರೈತರಿಗೆ ಪರಿಹಾರದ ಹಣ ವಿತರಿಸಲು ಮುಂದಾಗಬೇಕು. ಬಿದ್ದ ಮನೆಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಉಂಟಾದ ಅತಿವೃಷ್ಟಿ ವೇಳೆ ಸ್ವತಃ ಅವರೇ ನೆರೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಆಗ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ., ಬೆಳೆ ಹಾನಿ ಪರಿಹಾರ 12 ಸಾವಿರ ರೂ.ಯಿಂದ 25 ಸಾವಿರ ರೂ. ನೀಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಗಮನ ಹರಿಸದೆ ರೈತವಿರೋಧಿ ಆಡಳಿತ ನಡೆಸುತ್ತಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ಸೆ.3 ರಂದು ಜಿಎಸ್‌ಟಿ ಸುಧಾರಣೆ ಕೌನ್ಸಿಲ್ ಸಭೆಯಲ್ಲಿ ಮಾಡಿದ ಶಿಫಾರಸ್ಸಿನಂತೆ ಜಿಎಸ್‌ಟಿ ಇಳಿಕೆ ಮಾಡಿದ್ದು, ಬಡ ಜನರಿಗೆ ನರೇಂದ್ರ ಮೋದಿ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಮೊದಲ ಸಲ ಜೀವರಕ್ಷಕ ಮತ್ತು ಆರೋಗ್ಯ ವಿಮಾ ಪಾಲಿಸಿಗಳನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಬೆಣ್ಣೆ, ತುಪ್ಪ, ಹಾಲು, ನೀರು, ತೆಂಗಿನ ಪದಾರ್ಥ ಸೇರಿದಂತೆ ಇತರ ವಸ್ತುಗಳಿಗೆ ಜಿಎಸ್‌ಟಿ ಕಡಿಮೆ ಮಾಡಿದ್ದಾರೆ ಎಂದರು.

ತಾಂತ್ರಿಕ ಯುಗದಲ್ಲಿ ಮತ ಪತ್ರದ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿರುವುದು ದುರಂತ. ವಿಧಾನಸಭಾ ಚುನಾವಣೆಯಲ್ಲಿ ಮತಪತ್ರ ಬಳಕೆ ಕುರಿತು ಮಾತನಾಡಿಲ್ಲ. ದ್ವಂದ್ವ ನಿಲುವು ಅನುಸರಿಸುತ್ತಿದೆ ಎಂದರು. ಬಿಜೆಪಿ ಮಂಡಲ ಅಧ್ಯಕ್ಷ ಕೆ. ನಾಗಭೂಷಣ, ಮಂಜುನಾಥ ಪಾಟೀಲ್, ಪರಶುರಾಮ ಕೆಂಭಾವಿ, ಜಗದೀಶ ಹಿರೇಮಠ ಹಾಗೂ ಭೀಮಣ್ಣ ಹಿರೇಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net