ಬೆಳೆಹಾನಿ ಸಮೀಕ್ಷೆಯಲ್ಲಿ ಲೋಪವಾದರೆ ಕ್ರಮ

23Manju3
ಬೆಳಗಾವಿ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಡಿಸಿ ಮೊಹಮ್ಮದ್ ರೋಷನ್ ಮಾತನಾಡಿದರು. ವಿಜಯಕುಮಾರ ಹೊನಕೇರಿ, ದಿನೇಶಕುಮಾರ ಮೀನಾ ಇತರರಿದ್ದರು.
Published on

ಬೆಳಗಾವಿ: ಜಿಲ್ಲೆಯಲ್ಲಿ ಬೆಳೆಹಾನಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ, ತಕ್ಷಣ ಪರಿಹಾರ ವಿತರಿಸಬೇಕು. ಒಂದು ವೇಳೆ ಸಮೀಕ್ಷೆಯಲ್ಲಿ ವ್ಯತ್ಯಾಸ, ಲೋಪದೋಷಗಳು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಬೆಳೆಹಾನಿ ಕುರಿತಾದ ಸಮೀಕ್ಷೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಬೆಳೆಹಾನಿ ಸಮೀಕ್ಷೆ ಪ್ರಕಾರ ರೈತರಿಗೆ ಪರಿಹಾರ ಹಣ ವರ್ಗಾವಣೆಯಾಗುತ್ತಿಲ್ಲ. ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದ ರೈತರಿಗೆ ಪರಿಹಾರ ಬಂದಿಲ್ಲ ಎಂದು ದೂರುಗಳು ಕೇಳಿಬರುತ್ತಿವೆ. ಅಧಿಕಾರಿಗಳು ಈ ರೀತಿ ವಿಳಂಬ ತೋರಬಾರದು ಎಂದು ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಮೀಕ್ಷೆ ಕೈಗೊಂಡ ಬಳಿಕ ಪರಿಹಾರ ಪೋರ್ಟಲ್ನಲ್ಲಿ ನಮೂದಿಸಿ, ಅಪ್ರೂವಲ್ ನೀಡಿದ ಬೆಳೆಹಾನಿಗೊಳಗಾದ ರೈತರಿಗೆ ಈವರೆಗೂ ಪರಿಹಾರ ಹಣ ವರ್ಗಾವಣೆಯಾಗಿಲ್ಲ. ಕೂಡಲೇ ಅಂತಹ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ಬೆಳೆಹಾನಿ ಸಮೀಕ್ಷೆ, ಲೋಪದೋಷಗಳು ಪದೇ ಪದೆ ಕಂಡುಬರುತ್ತಿವೆ. ಕೃಷಿ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.

ಆಧಾರ್-ಆರ್‌ಟಿಸಿಯಲ್ಲಿ ಹೆಸರುಗಳು ವ್ಯತ್ಯಾಸ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದ ಕಾರಣ ಡಿಬಿಟಿ ಮೂಲಕ ಹಣ ವರ್ಗಾವಣೆಗೆ ತೊಂದರೆಯಾಗಿದೆ. ಕೂಡಲೇ ಅಂತಹ ರೈತರಿಗೆ ಆಧಾರ್ ಲಿಂಕ್ ಮಾಡಲು ಸೂಚನೆ ನೀಡಬೇಕು ಅಥವಾ ರೈತರಿಗೆ ಇಂಡಿಯನ್ ಪೋಸ್ಟ್ ಬ್ಯಾಂಕ್ ಖಾತೆ ತೆರೆಯಲು ಸೂಚನೆ ನೀಡಬೇಕು. ಅಥಣಿ, ಗೋಕಾಕ, ಚಿಕ್ಕೋಡಿ, ಕಾಗವಾಡ, ನಿಪ್ಪಾಣಿ ತಾಲೂಕಿನಲ್ಲಿ ಹೆಚ್ಚು ಆಧಾರ್-ಆರ್‌ಟಿಸಿ ಜೋಡಣೆಯಾಗಿಲ್ಲ. ಒಂದು ವೇಳೆ ಎರಡರಲ್ಲಿಯೂ ಹೆಸರು ವ್ಯತ್ಯಾಸ ಕಂಡುಬಂದಲ್ಲಿ ಅಂತಹ ಪ್ರಕರಣಗಳನ್ನು ಗುರುತಿಸಿ ಫ್ರೂಟ್ ತಂತ್ರಾಂಶದಲ್ಲಿ ಆಧಾರ್ ಪ್ರಕಾರ ನೋಂದಣಿ ಮಾಡಿ ಒಂದು ವಾರದೊಳಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಕೆಲ ತಾಲೂಕುಗಳಲ್ಲಿ ಬಾಕಿ ಉಳಿದಿರುವ ಬೆಳೆಹಾನಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು. ಅದೇ ರೀತಿ ಮನೆ ಹಾನಿಯಾಗಿರುವ ಸಮೀಕ್ಷೆ ಬಾಕಿಯಿದ್ದು, ಪರಿಹಾರ ಕೂಡ ವಿತರಣೆಯಾಗಿಲ್ಲ. ಕೂಡಲೇ ಸಮೀಕ್ಷೆ ಪೂರ್ಣಗೊಳಿಸಿ ಮನೆ ಹಾನಿಗಳಿಗೆ ವರ್ಗವಾರು ಪರಿಹಾರ ವಿತರಣೆ ಮಾಡಬೇಕು. ರೈತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಐಎಎಸ್ ಪ್ರೊಬೇಷನರಿ ಅಧಿಕಾರಿ ದಿನೇಶಕುಮಾರ ಮೀನಾ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ ಇತರರಿದ್ದರು.

ಶುದ್ಧ ಕುಡಿಯುವ ನೀರು ಪೂರೈಸಿ

ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರತಿ ಹದಿನೈದು ದಿನಕ್ಕೊಮ್ಮೆ ಕುಡಿಯುವ ನೀರು ಶುದ್ಧತೆ ಬಗ್ಗೆ ಪರೀಕ್ಷಿಸಬೇಕು. ಹೊಸ ಇಂದಿರಾ ಕ್ಯಾಂಟೀನ್‌ಗಳ ಪ್ರಾರಂಭಕ್ಕೆ ಈಗಾಗಲೇ ಗುರುತಿಸಿದ ಸ್ಥಳಗಳ ಬಗ್ಗೆ ಯಾವುದೇ ಸಮಸ್ಯೆಯಿದಲ್ಲಿ ಕೂಡಲೇ ಸಂಬಂಧಿಸಿದ ಶಾಸಕರ ಗಮನಕ್ಕೆ ತಂದು ಸ್ಥಳ ನಿಗದಿಪಡಿಸಬೇಕು. ಬಳಿಕ ಟೆಂಡರ್ ಕರೆದು ಕ್ಯಾಂಟೀನ್ ನಿರ್ಮಾಣಕ್ಕೆ ಸೂಚಿಸಬೇಕು. ಮುಖ್ಯಮಂತ್ರಿ ಜನತಾ ದರ್ಶನದಲ್ಲಿ ಸಲ್ಲಿಕೆಯಾಗಿರುವ ಗೋಕಾಕ ತಾಲೂಕಿನ ಎರಡು ಅರ್ಜಿಗಳು ಬಾಕಿ ಉಳಿದಿವೆ. ಕೂಡಲೇ ಅರ್ಜಿ ವಿಲೇವಾರಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net