ಡೋಣಿ ನದಿ ಪಾತ್ರದಲ್ಲಿ ಬೆಳೆ ಹಾನಿ, ಡಿಸಿ ಡಾ.ಆನಂದ ಕೆ ಭೇಟಿ, ಶೀಘ್ರ ಪರಿಹಾರಕ್ಕೆ ಕ್ರಮ ವಹಿಸುವುದಾಗಿ ಭರವಸೆ

DC VISIT DONI RIVER
ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಡೋಣಿ ನದಿ ಪಾತ್ರದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಬೆಳೆ ಹಾನಿ ಪರಿಶೀಲಿಸಿದರು. ಸಿಇಒ ರಿಷಿ ಆನಂದ, ಶಿವನಗೌಡ ಪಾಟೀಲ, ರಾಹುಲ್ ಭಾವಿದೊಡ್ಡಿ ಮತ್ತಿತರರಿದ್ದಾರೆ.
Published on

ವಿಜಯಪುರ: ಮಳೆ ಹಾಗೂ ಡೋಣಿ ಪ್ರವಾಹದಿಂದಾಗಿ ಉಂಟಾಗಿರುವ ಬೆಳೆ ಹಾನಿಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಹೇಳಿದರು.

ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಡೋಣಿ ನದಿ ಪಾತ್ರದಲ್ಲಿ ಶನಿವಾರ ಬೆಳೆ ಹಾನಿ ಪರಿಶೀಲಿಸಿದ ಅವರು, ಡೋಣಿ ನದಿ ಪಾತ್ರದಲ್ಲಿ ಪ್ರವಾಹದಿಂದಾಗಿ ಅಂದಾಜು 5500 ಹೆಕ್ಟೇರ್ ಜಮೀನು ಮುಳುಗಡೆಯಾಗಿ ಬೆಳೆ ಹಾನಿಯಾಗಿದೆ. ಈ ಕುರಿತು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಶೀಘ್ರದಲ್ಲೇ ಜಂಟಿ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸಲಿದ್ದು, ವರದಿಯನುಸಾರ ಬೆಳೆ ನಷ್ಟವಾಗಿರುವ ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ಜಮೆ ಮಾಡಲಾಗುವುದು ಎಂದರು.

ಡೋಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗಳಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಈಗಾಗಲೇ ಸ್ಥಳೀಯ ರೈತರು ಕೆಲವು ಬೇಡಿಕೆಗಳನ್ನು ಸಲ್ಲಿಸಿದ್ದು, ಇವರ ಬೇಡಿಕೆಯನ್ವಯ ಕಾಮಗಾರಿಗಳನ್ನು ಕೈಗೊಳ್ಳಲು ಬೇಕಾಗುವ ಅನುದಾನ, ಸೂಕ್ತ ಯೋಜನೆ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ಚರ್ಚಿಸಿ ಕ್ರಮ ವಹಿಸಲಾಗುವುದು.

ಡೋಣಿ ನದಿಯ ಪ್ರವಾಹ ನಿಯಂತ್ರಣಕ್ಕಾಗಿ ಅಂದಾಜು 7.5 ಕೋಟಿ ರೂ.ಗಳ ವಿಪತ್ತು ನಿರ್ವಹಣಾ ಉಪಶಮನ ನಿಧಿಯಡಿ ಈಗಾಗಲೇ ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗದಿಂದ ಸೇತುವೆ ಮುಂಭಾಗ ಹಾಗೂ ಹಿಂಭಾಗದಲ್ಲಿನ ಒಂದು ಕಿಮೀ ಅಂತರದಲ್ಲಿ ಹೂಳು ತೆಗೆಯುವುದು, ಗಿಡಗಂಟಿಗಳನ್ನು ತೆರವುಗೊಳಿಸುವುದು ಹಾಗೂ ಪಕ್ಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗದಂತೆ ಅರಣ್ಯೀಕರಣ ಕಾಮಗಾರಿ ಸೇರಿದಂತೆ ಪ್ರವಾಹ ನಿಯಂತ್ರಣಕ್ಕಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ನವೆಂಬರ್ ಅಂತ್ಯದಲ್ಲಿ ಹೂಳು ತೆಗೆಯುವುದು, ಸೇತುವೆ ಪಾತ್ರದಲ್ಲಿ ಅರಣ್ಯೀಕರಣ ಕಾಮಗಾರಿ ಸಹ ಆರಂಭವಾಗಲಿದ್ದು, ಡೋಣಿನದಿ ಪ್ರವಾಹ ನಿಯಂತ್ರಣ ಕಾಮಗಾರಿಗಳನ್ನು ಆದ್ಯತೆಯಾಗಿ ತೆಗೆದುಕೊಂಡು ಡೋಣಿ ನದಿಯಿಂದಾಗುವ ಸಮಸ್ಯೆಗಳನ್ನು ಅವಲೋಕಿಸಿ ಅದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದರು.

ಜಿಪಂ ಸಿಇಒ ರಿಷಿ ಆನಂದ, ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಹುಲ್ ಭಾವಿದೊಡ್ಡಿ, ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಪ್ರಶಾಂತ ಪೂಜಾರಿ, ತಹಸೀಲ್ದಾರ್ ಶಾಂತಲಾ ಚಂದನ, ಮಲ್ಲಿಕಾರ್ಜುನ ಭಟಗಿ ಮತ್ತಿತರರಿದ್ದರು.

ಬಳಿಕ ದದಾಮಟ್ಟಿ, ಉಕುಮನಾಳ, ಎಂಭತ್ನಾಳ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net