

ಮಡಿಕೇರಿ:
ಈ ವರ್ಷ ಕೊಡಗಿನಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಮಳೆಯಾಗಿದ್ದು, ರೈತರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗಿದ್ದು, ಶೇ. 33ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆಗಿರುವ ಕೃಷಿಯಲ್ಲಿ ಹಾನಿ ಪ್ರಕರಣಗಳನ್ನು ಪಟ್ಟಿ ಮಾಡಲಾಗಿದೆ. ಭತ್ತ ಮತ್ತು ಮುಸುಕಿನ ಜೋಳ ಬೆಳೆದಿದ್ದ ಒಟ್ಟು 32.426 ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಸಂಭವಿಸಿರುವುದಾಗಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ.
ಸೆಪ್ಟಂಬರ್ ಮಧ್ಯ ಭಾಗದ ನಂತರ ಜಿಲ್ಲೆಯಲ್ಲಿ ಮಳೆಯ ಅಬ್ಬರ ಸ್ವಲ್ಪ ಕಡಿಮೆ ಆಗುತ್ತಿರುವಂತೆ ಕಂಡು ಬರುತ್ತಿದೆ. ಒಂದೆರಡು ಪ್ರದೇಶಗಳನ್ನು ಹೊರತುಪಡಿಸಿದರೆ ಕೊಡಗಿನ ಬಹುತೇಕ ಭಾಗಗಳಲ್ಲಿ ಬಿಸಿಲು ಕಾಣಿಸಿಕೊಳ್ಳಲಾರಂಭಿಸಿದೆ. ಮಳೆ ಇಳಿಮುಖದ ಸೂಚನೆಯಾಗಿ ಕೆಲವೆಡೆ ಚಳಿಯ ಅನುಭವವೂ ಆಗುತ್ತಿದೆ. ಆದರೆ ಜೂನ್‌ನಿಂದ ಸುರಿದಿದ್ದ ಮಳೆ ಜಿಲ್ಲೆಯಾದ್ಯಂತ ಸಾಕಷ್ಟು ಹಾನಿ ಮಾಡಿದೆ.
ಕಳೆದ ವರ್ಷ ಕೊಡಗಿನಲ್ಲಿ ಮಳೆಯ ಕೊರತೆ ಇತ್ತು. ಇದರಿಂದಾಗಿ ಪಶ್ಚಿಮಘಟ್ಟದ ಮಡಿಲಲ್ಲಿ ಇರುವ ಜಿಲ್ಲೆಯಲ್ಲೂ ಬರಗಾಲದ ರೀತಿಯ ವಾತಾವರಣ ನಿರ್ಮಾಣ ಆಗಿತ್ತು. ಹಾಗಾಗಿ ಹಿಂದಿನ ವರ್ಷ ನಿರೀಕ್ಷೆಯಂತೆ ಭತ್ತ ಬೆಳೆಯಲು ಸಾಧ್ಯವಾಗಿರಲಿಲ್ಲ. ಕೃಷಿ ಇಲಾಖೆಯ ವಾರ್ಷಿಕ ಗುರಿಯ ಅರ್ಧದಷ್ಟು ಪ್ರದೇಶದಲ್ಲೂ ಕೃಷಿ ಚಟುವಟಿಕೆ ನಡೆದಿರಲಿಲ್ಲ.
ಈ ವರ್ಷ ಕಳೆದ ಬಾರಿಗಿಂತ ವಿಭಿನ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು. ಜೂನ್‌ನಲ್ಲಿ ಶುರುವಾಗಿದ್ದ ಮಳೆ ಸೆಪ್ಟೆಂಬರ್ ಮಧ್ಯಭಾಗದ ತನಕವೂ ಮುಂದುವರಿದಿತ್ತು. ಅಲ್ಲಲ್ಲಿ ಆಗಾಗ್ಗೆ ಬಿಸಿಲು ಕಂಡುಬರುತ್ತಿದ್ದರೂ ಜತೆಯಲ್ಲಿ ಮಳೆ ಕೂಡ ಕಾಣಿಸಿಕೊಳ್ಳುತ್ತಿದ್ದರಿಂದ ವ್ಯವಸಾಯ ಚಟುವಟಿಕೆ ಮೇಲೆ ದೊಡ್ಡ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಿತ್ತು. ಜನವರಿಯಿಂದ ಇಲ್ಲಿಯವರೆಗೆ 2751.48 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1471.62 ಮಿ.ಮೀ ಮಳೆಯಾಗಿತ್ತು.
ಜುಲೈ ಮತ್ತು ಆಗಸ್ಟ್ನಲ್ಲಿ ಜಿಲ್ಲೆಯಲ್ಲಿ ಬಿದ್ದ ಮಳೆ ಭತ್ತದ ಕೃಷಿಕರನ್ನು ಕಂಗಾಲು ಮಾಡಿತ್ತು. ಅದಾಗಲೇ ತಯಾರಾಗಿದ್ದ ಸಸಿಮಡಿ ಮಳೆ ನೀರಿನಲ್ಲಿ ಮುಳುಗಿ ಕೊಳೆತು ಹೋದರೆ, ನಾಟಿಯಾಗಿದ್ದ ಗದ್ದೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ನಿಂತು ಪೈರುಗಳು ಹಾಳಾಗಿದ್ದವು. ಬಹುತೇಕ ಮಳೆಯಾಶ್ರಿತ ಪ್ರದೇಶಗಳಾಗಿದ್ದರಿಂದ ಮರು ಬಿತ್ತನೆಯೂ ಅಸಾಧ್ಯವಾಗಿದ್ದ ಕಾರಣ ರೈತರು ಈ ಚಿಂತನೆಯನ್ನೇ ಕೈ ಬಿಟ್ಟಿದ್ದರು.
ಅಲ್ಪಾವಧಿಯ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಸೆಪ್ಟೆಂಬರ್‌ನಲ್ಲೂ ಭತ್ತದ ಕೃಷಿ ಚಟುವಟಿಕೆ ಕಂಡುಬAದಿತ್ತು. ಎಲ್ಲಾ ತಾಲೂಕುಗಳಲ್ಲಿ ಭತ್ತದ ನಾಟಿ ಕಾರ್ಯ ಬಹುತೇಕ ಮುಗಿದಿದ್ದರೂ, ನೀರಾವರಿ ಆಶ್ರಿತ ಅಲ್ಪಾವಧಿ ತಳಿಯ ಭತ್ತ ಬೆಳೆಯುವ ಪ್ರದೇಶಗಳಲ್ಲಿ ನಾಟಿ ಕಾರ್ಯ ನಡೆಯುತ್ತಿದೆ. ಈ ಮಧ್ಯೆ 2024-25ನೇ ಸಾಲಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಉಂಟಾದ ಬೆಳೆ ಹಾನಿಯನ್ನು ಅಂದಾಜಿಸುವ ಸಂಬAಧ ಕೃಷಿ ಇಲಾಖೆಯಿಂದ ನಡೆಸಲಾಗಿದ್ದ ಜಂಟಿ ಸಮೀಕ್ಷೆಯ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ.
ಸರ್ಕಾರದ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ ಬೆಳೆ ಹಾನಿಯನ್ನು ಅಂದಾಜಿಸಲು ಇಲಾಖಾವಾರು ಜಂಟಿ ಸಮೀಕ್ಷೆ ತಂಡವನ್ನು ರಚಿಸಲಾಗಿತ್ತು. ಈ ತಂಡ ಜಿಲ್ಲೆಯಲ್ಲಿ ಬೆಳೆಹಾನಿ ಸಮೀಕ್ಷೆ ನಡೆಸಿ ಶೇ.33ಕ್ಕಿಂತ ಅಧಿಕ ಕೃಷಿ ಬೆಳೆ ಹಾನಿಯಾದ ಪ್ರಕರಣಗಳ ಕುರಿತಂತೆ ವರದಿ ಸಲ್ಲಿಸಿದೆ. ಈ ವರದಿ ಪ್ರಕಾರ ಜಿಲ್ಲೆಯಲ್ಲಿ ಕೃಷಿ ಬೆಳೆ ಹಾನಿ ಪ್ರಕರಣಗಳ ಫಲಾನುಭವಿವಾರು ಪಟ್ಟಿ ತಯಾರಿಸಲಾಗಿದೆ. ಶೇ. 33ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಹಾನಿಯಾದ 128 ಪ್ರಕರಣಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದ್ದು, 32.426 ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಜಿಲ್ಲೆಯ ಐದೂ ತಾಲೂಕುಗಳಲ್ಲಿ ಭತ್ತ ಬೆಳೆದ ಪ್ರದೇಶಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಹಾನಿ ಸಂಭವಿಸಿದೆ. ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳಲ್ಲಿ ಭತ್ತದ ಜತೆಗೆ ಮುಸುಕಿನ ಜೋಳದ ಬೆಳೆಗೂ ಹಾನಿಯಾಗಿರುವುದು ಸಮೀಕ್ಷೆಯಲ್ಲಿ ಕಂಡುಬAದಿದೆ. ಪೊನ್ನಂಪೇಟೆ ತಾಲೂಕಿನಲ್ಲಿ 10.85 ಹೆಕ್ಟೇರ್, ಮಡಿಕೇರಿ ತಾಲೂಕಿನಲ್ಲಿ 5.58 ಹೆಕ್ಟೇರ್, ವಿರಾಜಪೇಟೆ ತಾಲೂಕಿನಲ್ಲಿ 1.3 ಹೆಕ್ಟೇರ್, ಸೋಮವಾರಪೇಟೆ ತಾಲೂಕಿನಲ್ಲಿ 11.25 ಹೆಕ್ಟೇರ್ ಹಾಗೂ ಕುಶಾಲನಗರ ತಾಲೂಕಿನಲ್ಲಿ 0.12 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ನಷ್ಟವಾಗಿರುವುದಾಗಿ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. ಇದರ ಜತೆಗೆ ಸೋಮವಾರಪೇಟೆ ತಾಲೂಕಿನಲ್ಲಿ 0.83 ಹೆಕ್ಟೇರ್ ಮತ್ತು ಕುಶಾಲನಗರ ತಾಲೂಕಿನಲ್ಲಿ 1.968 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆ ನಷ್ಟ ಆಗಿರುವ ಬಗ್ಗೆ ವರದಿ ಸಲ್ಲಿಸಲಾಗಿದೆ.
ಕೊಡಗಿನಲ್ಲಿ ಬೆಳೆ ಹಾನಿ ಅಂದಾಜಿಸಲು ಸರ್ಕಾರದ ನಿರ್ದೇಶನದಂತೆ ರಚಿಸಲಾಗಿದ್ದ ಇಲಾಖಾವಾರು ಜಂಟಿ ಸಮೀಕ್ಷೆ ತಂಡದ ಈ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದ್ದು, ಸಮೀಕ್ಷಾ ತಂಡ ರಚಿಸಿರುವ ಈ ಪಟ್ಟಿಯ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ತಹಸೀಲ್ದಾರ್ ಅಥವಾ ಸಂಬAಧಿಸಿದ ತಾಲೂಕುಗಳ ಕೃಷಿ ಇಲಾಖೆ ಕಚೇರಿಗಳಿಗೆ ಸಲ್ಲಿಸುವಂತೆ ರೈತರಿಗೆ ಸೂಚಿಸಲಾಗಿದೆ.