ಅರ್ಧಕ್ಕೆ ನಿಂತ ಸೋಲಾರ್ ಬೇಲಿಯಿಂದ ಬೆಳೆ ಹಾನಿ: ಬೂದಿಕೋಟೆ, ಕಾಮಸಮುದ್ರ ಹೋಬಳಿಯಲ್ಲಿ ಸಾವಿರಾರು ಎಕರೆ ನಾಶ

27 budikote 3 ane daalige tomoto bele nasha
ಕಾಡಾನೆಗಳ ದಾಳಿಗೆ ಬಂಗಾರಪೇಟೆ ತಾಲೂಕಿನ ಸಾಕರಸನಹಳ್ಳಿ ರೈತರ ಟೊಮ್ಯಾಟೊ ಬೆಳೆ ನಾಶವಾಗಿದೆ.
Published on

| ಜಿ.ನಾಗರಾಜ್, ಬೂದಿಕೋಟೆ

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಭಾಗದಲ್ಲಿ ಸೋಲಾರ್ ಬೇಲಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕಾಡಾನೆಗಳ ಹಿಂಡು ವಿವಿಧ ಬೆಳೆಗಳನ್ನು ನಾಶಮಾಡುತ್ತಿವೆ.

ಬೂದಿಕೋಟೆ ಮತ್ತು ಕಾಮಸಮುದ್ರ ಹೋಬಳಿಯಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶವಿದ್ದು, ತಮಿಳುನಾಡಿನಿಂದ ಪ್ರತಿ ವರ್ಷ ಆಹಾರ ಹರಸಿ ಕರ್ನಾಟಕದ ಗಡಿಭಾಗಕ್ಕೆ ಬಂದು ತಿಂಗಳಾನುಗಟ್ಟಲೆ ಮೊಕ್ಕಾಂ ಹೂಡುತ್ತವೆ. ಹೀಗೆ ಮೊಕ್ಕಾಂ ಹೂಡಿದ ಕಾಡಾನೆಗಳು, ಬೆಳೆಗಳನ್ನು ನಾಶ ಮಾಡಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಮಾಡುತ್ತಿವೆ. ಬೆಳೆ ರಕ್ಷಿಸಿಕೊಳ್ಳಲು ಹೋಗುವ ರೈತ ಆನೆ ದಾಳಿಗೆ ಮೃತನಾಗುತ್ತಿದ್ದಾನೆ. ಕಾಡಾನೆಗಳ ನಿಯಂತ್ರಣಕ್ಕೆ ಸರ್ಕಾರ ಕಾಡಂಚಿನಲ್ಲಿ ಸೋಲಾರ್ ಬೇಲಿ ಅಳವಡಿಸಲು ಮುಂದಾಗಿದೆ. ಇದರಿಂದ ಹಾವಳಿ ನಿಯಂತ್ರಣಕ್ಕೆ ಬಂದಿದೆಯಾದರೂ ದೋಣಿಮಡಗು ಗ್ರಾಪಂ ವ್ಯಾಪ್ತಿಯ ತಳೂರು ಹಾಗೂ ಮಲ್ಲೇಶನಪಾಳ್ಯದ ಬಳಿ ಸುಮಾರು 5 ಕಿ.ಮೀ.ನಷ್ಟು ಸೋಲಾರ್ ಬೇಲಿ ಅಳವಡಿಸದೆ ಅಧಿಕಾರಿಗಳು ನಿರ್ಲಕ್ಷ್ಯ್ಷ ವಹಿಸಿರುವುದರಿಂದ ಕಳೆದೊಂದು ವಾರದಿಂದ ಇದೇ ಮಾರ್ಗದಲ್ಲಿ ಕಾಡಾನೆಗಳು ಕದಿರಿನತ್ತ, ಸಾಕರಸನಹಳ್ಳಿ, ತಳೂರು ಸೇರಿ ಇತರ ಗ್ರಾಮಗಳತ್ತ ಲಗ್ಗೆ ಇಟ್ಟು ಟೊಮ್ಯಾಟೊ, ಬದನೆ, ವೀಳ್ಯದೆಲೆ, ತೆಂಗು, ಬಾಳೆ ಬೆಳೆಗಳನ್ನು ನಾಶ ಮಾಡುತ್ತಿವೆ.

ಗಡಿಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡನ್ನು ಓಡಿಸುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಇನ್ನಾದರೂ ಅಧಿಕಾರಿಗಳು ಬಾಕಿ ಉಳಿದಿರುವ ಸೋಲಾರ್ ಬೇಲಿ ಕಾರ್ಯವನ್ನು ಶೀಘ್ರವಾಗಿ ಮುಗಿಸಬೇಕು ಎಂಬುದು ಗಡಿಭಾಗದ ಗ್ರಾಮಗಳ ರೈತರ ಒತ್ತಾಯವಾಗಿದೆ.

ತಳೂರು ಗ್ರಾಮದ ಬಳಿ ಕಾಡಾನೆಗಳ ಹಾವಳಿ ಕಳೆದೊಂದು ವಾರದಿಂದ ಮಿತಿಮೀರಿದೆ. ಕಾಡಂಚಿನ ಗ್ರಾಮಗಳ ಜನ ಬದುಕುವುದೇ ಕಷ್ಟವಾಗಿದೆ. ಈ ಭಾಗದಲ್ಲಿ ಸುಮಾರು 5 ಕಿ.ಮೀ ನಷ್ಟು ಸೋಲಾರ್ ಬೇಲಿ ಅಳವಡಿಸದೇ ಬಾಕಿ ಉಳಿಸಿಕೊಂಡಿರುವುದರಿಂದ ಸಮಸ್ಯೆ ನಿರ್ಮಾಣವಾಗಿದ್ದು, ಆದಷ್ಟು ಬೇಗ ಬೇಲಿ ಕಾರ್ಯ ಪೂರ್ಣಗೊಳಿಸಬೇಕು.

| ನಾರಾಯಣಸ್ವಾಮಿ, ಗ್ರಾಪಂ ಸದಸ್ಯ, ತಳೂರು

ತಳೂರು ಭಾಗದಲ್ಲಿ ಭೂಮಿ ವಿವಾದ ಇರುವ ಕಾರಣ ಸೋಲಾರ್ ಬೇಲಿ ಸ್ಥಗಿತಗೊಂಡಿದೆ. ವಿವಾದವನ್ನು ಎಸಿಯವರು ಶೀಘ್ರವಾಗಿ ಬಗೆಹರಿಸುವ ವಿಶ್ವಾಸವಿದ್ದು, ಸಮಸ್ಯೆ ಬಗೆಹರಿದ ಕೂಡಲೇ ಬೇಲಿ ಅಳವಡಿಸಲಾಗುತ್ತದೆ.

| ಮಂಜುನಾಥ, ವಲಯ ಅರಣ್ಯಾಧಿಕಾರಿ, ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net