

ನಾಪೋಕ್ಲು: ಮದೆನಾಡು ಗ್ರಾಮದ ಸಾಲಾಪು ಸಮೀಪದ ಪಟ್ಟಡ ಕುಟುಂಬಸ್ಥರ ಕಾಫಿ ತೋಟಗಳಿಗೆ ಶನಿವಾರ ರಾತ್ರಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಸಾಕಷ್ಟು ಹಾನಿ ಮಾಡಿವೆ.
ಶನಿವಾರ ರಾತ್ರಿ ಪಟ್ಟಡ ಪುರುಷೋತ್ತಮ, ಪಟ್ಟಡ ಲಲಿತಾ, ಪಟ್ಟಡ ಧನಂಜಯ ಅವರಿಗೆ ಸೇರಿದ ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು ಬಾಳೆ, ಅಡಕೆ, ತೆಂಗು, ಕಾಫಿ ಗಿಡಗಳನ್ನು ತಿಂದು, ತುಳಿದು ಹಾನಿ ಮಾಡಿವೆ. ಕಾಡಾನೆಗಳ ಹಿಂಡು, ಜನ ವಸತಿ ಸಮೀಪದಲ್ಲೇ ಹಾದುಹೋಗಿರುವುದರಿಂದಾಗಿ ಕೆಲಸ ಕಾರ್ಯಕ್ಕೆ ಮನೆಯಿಂದ ಹೊರಗೆ ಬರಲು ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.