

ಅತಿವೃಷ್ಟಿಯಿಂದ ಸಂತ್ರಸ್ತರಾಗಿರುವ ರೈತರಿಗೆ ಪರಿಹಾರಧನ ವಿತರಣೆಯಲ್ಲಿ ನಡೆದಿರುವ ಅವ್ಯವಹಾರದ ಆಳ ಕೆದಕಿದಷ್ಟೂ ವಿಸ್ತಾರಗೊಳ್ಳುತ್ತಿದ್ದು, ಅಕ್ರಮದ ಬೆನ್ನತ್ತಿರುವ ವಿಜಯವಾಣಿಗೆ ಮತ್ತಷ್ಟು ಪ್ರಕರಣಗಳ ಜಾಡು ಸಿಕ್ಕಿದೆ. ನೆರೆಹಾನಿಯಿಂದ ತೊಂದರೆಗೀಡಾದ ರೈತರಿಗೆ ಹೊಸ ಬದುಕು ಕಟ್ಟಲು ಬಳಕೆಯಾಗಬೇಕಾದ ಹಣ ಅಧಿಕಾರಿಗಳ ಪಾಲಾಗುತ್ತಿರುವು ದರಿಂದ ಸರ್ಕಾರ ಕಣ್ತೆರೆ ಯಬೇಕೆಂಬ ಆಗ್ರಹ ಪ್ರತಿಧ್ವನಿಸಲಾರಂಭಿಸಿದೆ.
ಅನುಮಾನಕ್ಕೆ ಬಲ: ಹೊಸ ಪ್ರಕರಣಗಳ ಬಗ್ಗೆ ರೈತರಿಂದ ದೂರು ಕೇಳಿಬರುತ್ತಿದ್ದಂತೆಯೇ ಗ್ರಾಮಲೆಕ್ಕಾಧಿಕಾರಿ ಆರೋಗ್ಯ ಸಮಸ್ಯೆ ನೆಪವೊಡ್ಡಿ ರಜೆ ಮೇಲೆ ತೆರಳಿರುವುದು ಇನ್ನಷ್ಟು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆೆ.
ಪ್ರಮುಖ ಪ್ರಕರಣಗಳು
1. ಶಿರಗೋಡ ಗ್ರಾಮದ ರೈತ ಬಸವಂತಪ್ಪ ಕಲ್ಲಾಪುರ ರಿ.ಸ.ನಂ.152/1 (4.38 ಎಕರೆ) ಹೊಲಕ್ಕೆ ಸಂಬಂಧಿಸಿದ ಪರಿಹಾರ 46,528 ರೂಪಾಯಿ ಇದೇ ಗ್ರಾಮದ ವಿದ್ಯಾರ್ಥಿನಿ ಭೂಮಿಕಾ ಪುರುಷನಗೌಡ್ರ ಎಂಬುವವರ ಖಾತೆಗೆ ಜಮೆ ಆಗಿದೆ. ಆದರೆ, ಈ ಬಾಲಕಿ ಹೆಸರಿನಲ್ಲಿ ಯಾವುದೇ ಜಮೀನು ಇಲ್ಲ ಎಂಬುದು ವಾಸ್ತವ.
2. ರಾಮನಗೌಡ ಸಂಗನಗೌಡ್ರ ರಿ.ಸ.ನಂ. 58 (1.31 ಎಕರೆ) ಪ್ರದೇಶದ 16,683 ರೂ. ಪರಿಹಾರವನ್ನು ಕೆಂಪವ್ವ ಪುರುಷನಗೌಡ್ರ ಎಂಬುವರ ಖಾತೆಗೆ ಜಮೆ ಮಾಡಲಾಗಿದೆ. ಇದೇ ರೈತನ ರಿ.ಸ.ನಂ. 231/1 (3 ಎಕರೆ) ಹೊಲಕ್ಕೆ ಸಂಬಂಧಿಸಿದ ಪರಿಹಾರ 28,198 ರೂ. ಉಮಾ ಪುರುಷನಗೌಡ್ರ ಖಾತೆಗೆ ಜಮೆ ಆಗಿದೆ.
3. ಮಾವಕೊಪ್ಪ ಗ್ರಾಮದ ರೈತ ಮಂಜುನಾಥ ಉಜ್ಜಪ್ಪನವರ ರಿ.ಸ.ನಂ.-39/1/ಬ (3.30 ಎಕರೆ) ಪ್ರದೇಶದ ಪರಿಹಾರ ಗುತ್ತೆಪ್ಪ ಸುಣಗಾರ ಖಾತೆಗೆ, ಇದೇ ಗ್ರಾಮದ ಶಾರದಾ ಬೆಲ್ಲದ ರಿ.ಸ.ನಂ.17/8 (2.29 ಎಕರೆ)ನ ಹೊಲದ ಪರಿಹಾರ 18,310 ರೂ. ವಿಶ್ವನಾಥ ಪೂಜಾರ ಖಾತೆಗೆ ವರ್ಗಾವಣೆಯಾಗಿದೆ. ಶಿರಗೋಡ ಗ್ರಾಮದ ನಾಗೇಂದ್ರಪ್ಪ ಭರಮಪ್ಪ ಮಡಿವಾಳರ ರಿ.ಸ.ನಂ.107/1ರ 3 ಎಕರೆ ಹೊಲಕ್ಕೆ ಸಂಬಂಧಿಸಿದ 30,837 ರೂ. ಇದೇ ಗ್ರಾಮದ ರಶ್ಮೀ ವೀರನಗೌಡ ಚನ್ನಗೌಡರ ಬ್ಯಾಂಕ್ ಖಾತೆಗೆ ಜಮಾ ಆಗಿವೆ. ಇದಲ್ಲದೆ, ರಶ್ಮಿ ಖಾತೆಗೆ ಇದೇ ಗ್ರಾಮದ ರಿ.ಸ.ನಂ. 91/1ರ 23 ಗುಂಟೆ ಹಾಗೂ 117/1ರ 29 ಗುಂಟೆ ಕ್ಷೇತ್ರದ ಬೆಳೆ ಹಾನಿ ಪರಿಹಾರವೂ ಜಮಾ ಆಗಿರುವುದು ಅನುಮಾನ ಹುಟ್ಟುಹಾಕಿದೆ.
ಖಾಸಗಿ ವ್ಯಕ್ತಿಗಳಿಗೆ ಅಧಿಕಾರ
ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲೆಂದೇ ನೇಮಕಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ, ಇಲಾಖೆ ಮಾಹಿತಿ ಸೋರಿಕೆ ಮಾಡುವುದರಿಂದಾಗುವ ಅನಾಹುತಗಳಿಗೆ ಹಾನಗಲ್ಲ ತಾಲೂಕು ಕಂದಾಯ ಇಲಾಖೆಯೇ ಉತ್ತಮ ಉದಾಹರಣೆ!
ಪರಿಹಾರ ತಂತ್ರಾಂಶದಲ್ಲಿ ಗ್ರಾಮ ಲೆಕ್ಕಾಧಿಕಾರಿ ತನ್ನ ವ್ಯಾಪ್ತಿಯ ರೈತರ ಜಮೀನಿನ ವಿವರ, ಬೆಳೆ ಹಾನಿ ಮಾಹಿತಿ, ಆಧಾರ ಸಂಖ್ಯೆ ಸೇರಿ ವಿವಿಧ ಮಾಹಿತಿಯನ್ನು ಅಪ್ಲೋಡ್ ಮಾಡಬೇಕು. ಈ ತಂತ್ರಾಂಶ ಬಳಸಲು ಯೂಸರ್ ನೇಮ್ ಮತ್ತು ಪಾಸ್ವರ್ಡ್ಗಳನ್ನು ನೀಡಲಾಗಿದೆ. ಆದರೆ, ಅಧಿಕಾರಿಗಳು ತಾವೇ ಮಾಹಿತಿ ದಾಖಲಿಸದೆ ಖಾಸಗಿ ವ್ಯಕ್ತಿಗಳಿಗೆ ಯೂಸರ್ ನೇಮ್ ಮತ್ತು ಪಾಸ್ವರ್ಡ್ ನೀಡಿದ್ದಾರೆ.
ಈ ಅವಕಾಶ ದುರ್ಬಳಕೆ ಮಾಡಿಕೊಂಡಿರುವ ಖಾಸಗಿ ವ್ಯಕ್ತಿಗಳು ಸರ್ಕಾರದ ಹಣವನ್ನು ಯಾರ್ಯಾರದೋ ಹೆಸರಲ್ಲಿ ಇನ್ಯಾರದೋ ಖಾತೆಗೆ ಜಮೆ ಮಾಡಿದ್ದಾರೆ. ಫಸಲು ಹಾನಿಗೊಳಗಾದ ರೈತರ ಹೆಸರಿನೊಂದಿಗೆ ಗ್ರಾಮದ ಕೆಲ ವ್ಯಕ್ತಿಗಳು ತಮ್ಮ ಸಂಬಂಧಿಕರ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಸಂಖ್ಯೆ ಜೋಡಣೆ ಮಾಡಿರುವುದು ಹಣವನ್ನು ವರ್ಗಾಯಿಸಿಕೊಳ್ಳಲೆಂದೇ ಮಾಡಿರುವ ಪೂರ್ವ ನಿಯೋಜಿತ ಹುನ್ನಾರ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಏಜೆಂಟರು ಹಾಗೂ ಗ್ರಾಮ ಲೆಕ್ಕಾಧಿಕಾರಿ ಶಾಮೀಲಾಗಿಯೇ ಈ ಅಕ್ರಮ ನಡೆಸಿದ್ದಾರೆ.
ವೆಬ್ಸೈಟೇ ಬಂದ್!
ರೈತರು ಭೂಮಿ ಕೇಂದ್ರದ ಆನ್ಲೈನ್ (ಪರಿಹಾರ ಪೇಮೆಂಟ್ ವೆಬ್ಸೈಟ್) ಮೂಲಕ ಈ ಹಗರಣದ ದಾಖಲೆಗಳನ್ನು ಪಡೆದುಕೊಳ್ಳಬಾರದೆಂಬ ಉದ್ದೇಶಕ್ಕಾಗಿ ಡೌನ್ಲೋಡ್ ಆಗದಂತೆ ಆ ಪೇಜ್ ಬಂದ್ ಮಾಡಲಾಗಿದೆ. ಹಗರಣದಲ್ಲಿ ಮುಖ್ಯ ಪಾತ್ರ ವಹಿಸಿರುವ ಮೊದಲಿದ್ದ ಗ್ರಾಮಲೆಕ್ಕಾಧಿಕಾರಿಯನ್ನು ಇಲ್ಲಿಂದ ವರ್ಗಾಯಿಸಿ, ಬೇರೊಬ್ಬರನ್ನು ತಂದು ಕೂರಿಸಲಾಗಿದೆ.
ಭೀಕರ ನೆರೆಗೆ ರಾಜ್ಯಾದ್ಯಂತ ಸಾವಿರಾರು ಕುಟುಂಬಗಳು ಸಂತ್ರಸ್ತವಾಗಿವೆ. ಇಂತಹ ಕುಟುಂಬಗಳಿಗೆ ಸಿಗಬೇಕಾದ ಪರಿಹಾರವನ್ನೂ ನುಂಗಿ ಹಾಕಿರುವುದು ಅಕ್ಷಮ್ಯ, ಅಮಾನವೀಯ. ಸರ್ಕಾರ ತಕ್ಷಣ ಸಂತ್ರ ಸ್ತರಿಗೆ ನ್ಯಾಯಯುತ ಪರಿಹಾರ ಸಿಗುವಂತೆ ಕ್ರಮಕೈಗೊಳ್ಳ ಬೇಕೆಂಬುದು ವಿಜಯವಾಣಿ ಆಶಯ.
ರಶ್ಮಿ ಚನ್ನಗೌಡರ ಹೆಸರಿನಲ್ಲಿ ಹೊಲವಿಲ್ಲದಿದ್ದರೂ ನನ್ನ ಪರಿಹಾರದ ಹಣ ಅವರ ಖಾತೆಗೆ ಏಕೆ ಹೋಯಿತು? ಇಲ್ಲಿನ ಬಹಳಷ್ಟು ಜನರ ಪರಿಹಾರ ಇದೇ ಗ್ರಾಮದ ಕೆಲವರ ಸಂಬಂಧಿಕರ ಖಾತೆಗೆ ಜಮೆ ಆಗಿರುವುದು ವ್ಯವಸ್ಥಿತ ಅವ್ಯವಹಾರದ ಸಂಚು ಎಂಬುದನ್ನು ಮೇಲ್ನೋಟಕ್ಕೆ ಸಾಬೀತುಪಡಿಸಿದೆ. ಇವರ ಮೇಲೆ ಕ್ರಿಮಿನಲ್ ದೂರು ದಾಖಲಿಸಿ, ವಿಚಾರಣೆಗೊಳಪಡಿಸಿದರಷ್ಟೇ ಸತ್ಯ ಹೊರಬರುತ್ತದೆ. | ನಾಗೇಂದ್ರಪ್ಪ ಭರಮಪ್ಪ ಮಡಿವಾಳರ, ಶಿರಗೋಡ ರೈತ
| ಗಿರೀಶ ದೇಶಪಾಂಡೆ ಹಾನಗಲ್ಲ