

ಕೃಷ್ಣಮೂರ್ತಿ ಪಿ.ಎಚ್ ಮಾಯಕೊಂಡ
ಆನಗೋಡು ಹೋಬಳಿಯ ಗ್ರಾಮಗಳಲ್ಲಿ ಈ ಬಾರಿ ಹಿಂಗಾರು ಹಂಗಾಮಿನ ಸೂರ್ಯಕಾಂತಿ ಬಂಪರ್ ಬೆಳೆ ಬಂದಿದ್ದರೂ ಬೆಲೆ ಕುಸಿತದಿಂದ ರೈತರು ಕಂಗಲಾಗಿದ್ದಾರೆ.
ಕಳೆದ ವರ್ಷ ಪ್ರತಿ ಕ್ವಿಂಟಾಲ್ ಸೂರ್ಯಕಾಂತಿಗೆ 7,500 - 8000 ರೂ.ದರವಿತ್ತಾದರೂ ಈ ಬಾರಿ 5 ರಿಂದ 6 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಚಿತ್ರದುರ್ಗದ ಮಾರುಕಟ್ಟೆಯಲ್ಲಿ ಬುಧವಾರ 4000- 4500 ರೂ. ದರವಿತ್ತು.
ಅಡುಗೆ ಎಣ್ಣೆ ದರ ಗಗನಕ್ಕೇರಿದ್ದರೂ ಎಣ್ಣೆಕಾಳುಗಳ ದರ ಪಾತಾಳಕ್ಕೆ ಕುಸಿದಿದೆ ಎಂದು ರೈತರು ಆತಂಕ ವ್ಯಕ್ತ ಪಡಿಸಿದ್ದಾರೆ. ಪ್ರತಿ ಕ್ವಿಂಟಾಲ್ ಸೂರ್ಯಕಾಂತಿಗೆ ಕನಿಷ್ಠ 10,000 ರೂ. ಬೆಂಬಲ ಬೆಲೆ ಘೊಷಿಸಿ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿದ್ದಾರೆ.
ಬಿತ್ತನೆಯಿಂದ ಕಟಾವಿನವರೆಗೂ ಪ್ರತಿ ಎಕರೆಗೆ 10 ರಿಂದ 15 ಸಾವಿರ ರೂ. ಖರ್ಚು ಬರುತ್ತದೆ.7 ರಿಂದ 8 ಕ್ವಿಂಟಾಲ್ ಇಳುವರಿ ಬರುತ್ತದೆ. ಬೀಜ. ಬಿತ್ತನೆ, ನೀರು ಪೂರೈಕೆ, ರಸಗೊಬ್ಬರ, ಕಟಾವಿನವರೆಗೂ ಮಾಡಿದ ಖರ್ಚಿಗೂ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗೂ ಲೆಕ್ಕ ಹಾಕಿದರೂ ಏನೂ ಉಳಿಯುವುದಿಲ್ಲ ಎನ್ನುತ್ತಾರೆ ರೈತರು.
ಮಾಯಕೊಂಡ ವ್ಯಾಪ್ತಿಯ ಗುಡಾಳು, ಗುಮ್ಮನೂರು, ಕಾಟಿಹಳ್ಳಿ, ಮಂಡಲೂರು ಸೇರಿ ಕೆಲ ಗ್ರಾಮಗಳಲ್ಲಿ ಪ್ರತಿ ವರ್ಷ ಹಿಂಗಾರು ಹಂಗಾಮಿಗೆ ರಾಗಿ, ಸೂರ್ಯಕಾಂತಿ ಬೆಳೆಯಲಾಗುತ್ತಿದೆ. ಪ್ರಸಕ್ತ ವರ್ಷ ಗುಮ್ಮನೂರಿನ 100 ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯಲಾಗಿದೆ. ಕಳೆದ ವರ್ಷ ಉತ್ತಮ ಮಳೆಯಾದ ಕಾರಣ ಮುಂಗಾರು ಜೋಳ ಬೆಳೆದು ಸೂರ್ಯಕಾಂತಿ ಬಿತ್ತನೆ ಮಾಡಿದ್ದರು.
ಹಕ್ಕಿಗಳ ಕಾಟಕ್ಕೆ ಸದ್ದಿನ ಮದ್ದು: ಸೂರ್ಯಕಾಂತಿ ಹೂವಿನ ನಂತರ ಕಾಳು ಕಟ್ಟುವ ಅವಧಿಯಿಂದ ಕಟಾವಿನವರೆಗೂ ಗಿಳಿ, ಗೊರವಂಕ, ಗುಬ್ಬಿ, ಇತರ ಪಕ್ಷಿಗಳು ಕಾಳು ತಿಂದು ತೆನೆಗಳನ್ನೇ ನೆಲಕುರುಳಿಸುತ್ತವೆ. ಆದ್ದರಿಂದ ಬೆಳೆ ಕಟಾವು ಮಾಡುವವರೆಗೆ ಹೊಲದಲ್ಲಿ ಗುಡಿಸಲು ಕಟ್ಟಿಕೊಂಡು ಖಾಲಿ ಡಬ್ಬಗಳನ್ನು ಬಡಿದು ಕರ್ಕಶ ಶಬ್ಧ ಮಾಡುವ ಮೂಲಕ ಹಕ್ಕಿಗಳನ್ನು ಓಡಿಸುವ ಕೆಲಸ ಮಾಡಬೇಕು ಎಂದು ರೈತ ಪ್ರಕಾಶ್ ಹೇಳುತ್ತಾರೆ.
ಬೆಂಬಲ ಬೆಲೆಗೆ ಒತ್ತಾಯ: ಸೂರ್ಯಕಾಂತಿ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ರೈತರಿಂದ ನೇರವಾಗಿ ಖರೀದಿ ಮಾಡುವಂತೆ ರೈತರ ಒತ್ತಾಯಿಸಿದ್ದಾರೆ.
ಆನಗೋಡು ಹೋಬಳಿಯ ಕೆಲ ಗ್ರಾಮಗಳಲ್ಲಿ ಸೂರ್ಯಕಾಂತಿ ಬೆಳೆಯನ್ನು ಪ್ರತಿವರ್ಷ ಬೆಳೆಯುತ್ತಿದ್ದು ಪರಿವರ್ತನ ಪದ್ಧತಿ ಶ್ಲಾಘನೀಯ. ಮುಂದಿನ ಬೇಸಿಗೆ ಹಂಗಾಮಿಗೆ ಮಾಯಕೊಂಡ, ಆನಗೋಡು, ದಾವಣಗೆರೆ ಕಸಬಾ ಹೋಬಳಿಗಳ ಎಲ್ಲ ಗ್ರಾಮಗಳ ರೈತರು ಸೂರ್ಯಕಾಂತಿ ಬೆಳೆ ಬೆಳೆಯಬೇಕು. | ಡಿ.ಎಂ.ಶ್ರೀಧರ ಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ಬೇಸಿಗೆ ತಾಪದಿಂದ ಕೊಳವೆಬಾವಿಗಳಲ್ಲಿ ನೀರು ಬತ್ತುತ್ತಿದೆ. ಈ ನಡುವೆಯೂ ಲ್ಪ ಸ್ವಲ್ಪ ನೀರು ಹಾಯಿಸಿ ಕಷ್ಟಪಟ್ಟು ಬೆಳೆದಿರುವ ಸೂರ್ಯಕಾಂತಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಇಲ್ಲವಾಗಿದೆ. ಸರ್ಕಾರ ಖರೀದಿ ಕೇಂದ್ರ ತೆರೆದು ಪ್ರತಿ ಕ್ವಿಂಟಾಲ್ಗೆ 10 ಸಾವಿರ ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು. | ಗುಮ್ಮನೂರು ಬಸವರಾಜ್, ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಎರಡೂವರೆ ಎಕರೆ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆದಿದ್ದೇವೆ. ಬಿತ್ತನೆ ಮಾಡಿ ಬೆಳೆ ಕಟಾವಿನವರೆಗೂ ಸಾಕಷ್ಟು ಖರ್ಚು ಬಂದಿದೆ. ಸ್ವಲ್ಪ ತೇವಾಂಶ ಇರುವುದರಿಂದ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ಗೆ 4200 -4500 ರೂ. ಬೆಲೆ ಇದೆ. ಕಳೆದ ವಾರ 5500 ರಿಂದ 6500 ರೂ.ವರೆಗೆ ಬೆಲೆ ಇತ್ತು. ಬೆಳೆಗೆ ತಕ್ಕ ಬೆಲೆ ಸಿಕ್ಕರೆ ಲಾಭವಾಗುತ್ತ ದೆ. | ತಿಪ್ಪಮ್ಮ ರುದ್ರಪ್ಪ, ರೈತ ಮಹಿಳೆ