

ತುಮಕೂರು : ಜಿಲ್ಲಾ ಕೇಂದ್ರ ತುಮಕೂರು ನಗರದಲ್ಲಿ ಕಳೆದ ಎರಡು ತಿಂಗಳಲ್ಲಿ 13 ಸಾವಿರಕ್ಕೂ ಹೆಚ್ಚು ಜನರು ಕರೊನಾ ಸೋಂಕು ತಗುಲಿದ್ದು, 107 ಮಂದಿ ಮೃತಪಟ್ಟಿದ್ದಾರೆ. ಜನತಾ ಕರ್ಫ್ಯೂ ಜಾರಿಯಾದ ಬಳಿಕವೂ ಸೋಂಕಿತರ ಸಂಖ್ಯೆ ಇಳಿಮುಖ ಆಗದಿರುವುದರಿಂದ ಕರೊನಾ ಹತೋಟಿಗೆ ತರುವಲ್ಲಿ ಮಹಾನಗರ ಪಾಲಿಕೆ ಹೈರಾಣಾಗಿದೆ.
ಏಪ್ರಿಲ್‌ನಲ್ಲಿ 5909 ಮಂದಿಗೆ ಸೋಂಕು ತಗುಲಿತ್ತು. ಮೇ 1 ರಿಂದ 23ರವರೆಗೆ 7156 ಜನರಲ್ಲಿ ಸೋಂಕು ಕಂಡುಬಂದಿದ್ದು ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಕರೊನಾ ಕಟ್ಟಿಹಾಕುವ ಪಾಲಿಕೆಯ ಪ್ರಯತ್ನ ಕೈಗೂಡುತ್ತಿಲ್ಲ.
3848 ಸಕ್ರಿಯ ಪ್ರಕರಣ: ನಗರವಾಸಿಗಳಿಗೆ ಕೋವಿಡ್ ಅರಿವು ಇರುವುದರಿಂದ ಸೋಂಕು ಹರಡದಂತೆ ತಡೆಗಟ್ಟಬಹುದೆಂಬ ನಿರೀಕ್ಷೆಗಳು ಹುಸಿಯಾಗಿವೆ. ಸುಶಿಕ್ಷಿತರೇ ಹೆಚ್ಚಿರುವ ವಾರ್ಡ್‌ಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದು ಪಾಲಿಕೆಗೆ ತಲೆನೋವು ತಂದಿದೆ. ಕಳೆದ ಎರಡು ತಿಂಗಳಲ್ಲಿ ಒಟ್ಟು 13065 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 9110 ಮಂದಿ ಈವರೆಗೆ ಗುಣಮುಖರಾಗಿ ಮನೆಗೆ ಮರಳಿದ್ದಾರೆ. 107 ಮಂದಿ ಬಲಿಯಾಗಿದ್ದಾರೆ. ಒಟ್ಟು 3848 ಸಕ್ರಿಯ ಪ್ರಕರಣಗಳಿವೆ. ಕೋವಿಡ್ ಕೇರ್ ಸೆಂಟರ್‌ಗಳಿಗಿಂತ ಬಹುತೇಕರು ಹೋಂ ಐಸೋಲೇಷನ್‌ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
12 ಹಾಟ್‌ಸ್ಪಾಟ್ !: ನಗರದಲ್ಲಿ ಪ್ರತಿನಿತ್ಯ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಆಧರಿಸಿ 12 ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ವಾರ್ಡ್1, ವಾರ್ಡ್ 2 ಒಳಗೊಂಡ ಶಿರಾಗೇಟ್ ವ್ಯಾಪ್ತಿ, ಜಯನಗರ ಪೂರ್ವ, ಪಶ್ಚಿಮ ಬಡಾವಣೆ, ನಜರಾಬಾದ್, ದಿಬ್ಬೂರು, ಉಪ್ಪಾರಹಳ್ಳಿ ಸೇರಿ ನಿತ್ಯ 30ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುವ ಪ್ರದೇಶಗಳನ್ನು ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ. ಎಸ್‌ಐಟಿ ಬಡಾವಣೆ, ಅಶೋಕನಗರ, ಎಸ್‌ಎಸ್ ಪುರಂ ಭಾಗವು ಹಾಟ್‌ಸ್ಪಾಟ್ ಆಗಿದ್ದು ಈ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ.
ಈ ಭಾಗದಲ್ಲಿ ಸ್ಯಾನಿಟೈಸ್ ಮಾಡುವುದು, ಸೋಂಕಿತರ ಮನೆ ಮನೆಗಳಿಗೆ ಮೆಡಿಕಲ್ ಕಿಟ್, ಪ್ರತಿನಿತ್ಯ ಸೋಂಕಿತರ ಆರೋಗ್ಯ ತಪಾಸಣೆ ಮಾಡುವುದರ ಜತೆಗೆ ಅವರ ಮೇಲೆ ಸಂಪೂರ್ಣ ನಿಗಾವಹಿಸಲಾಗಿದೆ. ಇಷ್ಟಾದರೂ ನಗರದಲ್ಲಿ ಸೋಂಕು ಹರಡದಂತೆ ತಡೆಯಲು ಸಾಧ್ಯವಾಗುತ್ತಿಲ್ಲ.
ಕುಂಭಮೇಳದ ಆತಂಕ ?: ಜಯನಗರ, ಸಪ್ತಗಿರಿ ಬಡಾವಣೆ, ನೃಪತುಂಗ ಬಡಾವಣೆ, ಮಾರುತಿ ನಗರಗಳಲ್ಲಿನ ಸಾಕಷ್ಟು ಜನ ಉತ್ತರ ಪ್ರದೇಶದ ಹರಿದ್ವಾರ ಕುಂಭಮೇಳದಲ್ಲಿ ಭಾಗವಹಿಸಿದ್ದು, ಅಲ್ಲಿಗೆ ಹೋಗಿಬಂದ ಸಾಕಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಗರದಲ್ಲಿ ಸೋಂಕು ಹರಡಲು ಇದು ಪ್ರಮುಖ ಕಾರಣ ಎನ್ನಲಾಗಿದೆ. ಆದರೆ, ಪಾಲಿಕೆಯಾಗಲಿ, ಜಿಲ್ಲಾಡಳಿತವಾಗಲಿ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಜನಸೇವಾ ರಥ: ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಕರೊನಾ ಸೋಂಕಿಗೆ ತುತ್ತಾಗುವ ಸಾರ್ವಜನಿಕರು ಆಸ್ಪತ್ರೆಗೆ, ಕೋವಿಡ್ ಕೇರ್ ಸೆಂಟರ್‌ಗೆ, ಆರೋಗ್ಯ ತಪಾಸಣೆಗೆ ಹಾಗೂ ಸೋಂಕಿನಿಂದ ಗುಣಮುಖರಾದ ನಂತರ ತಮ್ಮ ಮನೆಗಳಿಗೆ ಸುರಕ್ಷಿತವಾಗಿ ತೆರಳಲು 2 ಬಸ್‌ಗಳ ಉಚಿತ ವ್ಯವಸ್ಥೆಯನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸ್ವಂತ ಖರ್ಚಿನಲ್ಲಿ ವ್ಯವಸ್ಥೆ ಮಾಡಿದ್ದಾರೆ.