ಮೈಸೂರಿನ ಎಲೆತೋಟದಲ್ಲಿ ಕಾಣಿಸಿಕೊಂಡ ಮೊಸಳೆ

Crocodile spotted in Mysore
Published on

ಮೈಸೂರು: ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನಗರದ ಎಲೆತೋಟದ ರಾಜಾ ಕಾಲುವೆಯಲ್ಲಿ ಮೊಸಳೆಯೊಂದು ಶನಿವಾರ ಕಾಣಿಸಿಕೊಂಡಿತು. ಮೊಸಳೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಾಕಷ್ಟು ಹೊತ್ತು ಕಾರ್ಯಾಚರಣೆ ನಡೆಸಿದರೂ ಮೊಸಳೆ ಸೆರೆ ಸಿಗಲಿಲ್ಲ.

ಮೊಸಳೆ ರಾಜಾಕಾಲುವೆಯಲ್ಲಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಮಧ್ಯಾಹ್ನ 3.30ಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸಂಜೆ 6.30ರವರೆಗೆ ಕಾರ್ಯಾಚರಣೆ ನಡೆಸಿದರೂ ಮೊಸಳೆಯನ್ನು ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ. ಮೊಸಳೆ ಕಾಣಿಸಿಕೊಂಡ ಜಾಗದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಭಾನುವಾರ ಮೊಸಳೆ ಮತ್ತೆ ಕಾಣಿಸಿಕೊಂಡರೆ ಕಾರ್ಯಾಚರಣೆ ಮುಂದುವರೆಸಲು ನಿರ್ಧರಿಸಲಾಗಿದೆ.

ಮೊಸಳೆ ಸೆರೆಗೆ ಮೂರು ಬಾರಿ ಬಲೆ ಬೀಸಲಾಯಿತು. ಇನ್ನೇನು ಸೆರೆ ಹಿಡಿದಾಯಿತು ಅನ್ನುವಷ್ಟರಲ್ಲಿ ಮೊಸಳೆ ಬಲೆಯಿಂದ ತಪ್ಪಿಸಿಕೊ ಂಡಿತು. ರಾಜಾ ಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದ ಹಿನ್ನೆಲೆಯಲ್ಲಿ ಸೆರೆ ಕಾರ್ಯಾಚರಣೆಗೆ ಸಾಕಷ್ಟು ಅಡ್ಡಿ ಎದುರಾಯಿತು. ಈ ರಾಜಾಕಾಲುವೆ ನೀರು ಮುಂದಕ್ಕೆ ಹರಿದು ಸೂಯೇಜ್ ಫಾರ್ಮ್ ಸೇರುತ್ತದೆ. ಸೂಯೇಜ್‌ಫಾರ್ಮ್‌ನಲ್ಲಿ ಸಾಕಷ್ಟು ಮೊಸಳೆಗಳು ಇದ್ದು, ಭಾರಿ ಮಳೆಗೆ ಮೊಸಳೆಯು ಅಲ್ಲಿಂದ ಬಂದಿರುವ ಸಾಧ್ಯತೆ ಇದೆ.

ಮೊಸಳೆ ಸೆರೆ ಕಾರ್ಯಾಚರಣೆಯನ್ನು ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಹೀಗಾಗಿ ಎಲೆತೋಟದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಕಂಡು ಬಂತು. ಮೊಸಳೆ ಕಾಣಿಸಿಕೊಂಡಿರುವ ಜಾಗಕ್ಕೆ ರಾತ್ರಿ ಯಾರು ಸಹ ಭೇಟಿ ನೀಡಬೇಡಿ ಎಂದು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net