

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ದಾಸನಪುರ ಗ್ರಾಮದ ಕಾವೇರಿ ನದಿಯಲ್ಲಿ ಶನಿವಾರ ಪ್ರತ್ಯಕ್ಷವಾಗಿರುವ ಮೊಸಳೆ ನೋಡಲು ಸಾರ್ವಜನಿಕರು ಮುಗಿಬಿದ್ದರು.
ಕಾವೇರಿ ನದಿಗೆ ಅಡ್ಡಲಾಗಿ ಹಾದು ಹೋಗಿರುವ ಸೇತುವೆ ಮೇಲೆ ನಿಂತು ಸಾರ್ವಜನಿಕರು ನದಿಯ ವಿಹಂಗಮ ನೋಟವನ್ನು ಸವಿಯುವ ವೇಳೆ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿತು.
ಈ ವೇಳೆ ದಾಸನಪುರ ಗ್ರಾಮ ಸೇರಿದಂತೆ ನೆರೆಹೊರೆ ಗ್ರಾಮಸ್ಥರು ಮೊಸಳೆ ನೋಡಲು ಬಂದರು. ತಮ್ಮ ಮೊಬೈಲ್‌ನಲ್ಲಿ ಮೊಸಳೆಯನ್ನು ಸೆರೆಯಿಡಿದುಕೊಳ್ಳುತ್ತಿರುವುದು ಕಂಡುಬಂತು. ಇದು ಸಾಮಾಜಿಕ ಜಾಲತಾಣಗಳಲೂ ವೈರಲ್ ಆಗಿದೆ.
ದಾಸನಪುರ ನದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವುದನ್ನು ನೋಡಿ ಜನರು ಆಶ್ಚರ್ಯಗೊಂಡರೆ, ಮತ್ತೊಂದೆಡೆ ಈ ಭಾಗದಲ್ಲಿ ಬರುವ ನದಿ ಪಾತ್ರದ ಗ್ರಾಮಗಳಾದ ದಾಸನಪುರ, ಮುಳ್ಳೂರು, ಹರಳೆ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.