

ಹೊಳೆಆಲೂರ: ಗ್ರಾಮದ ಮಲಪ್ರಭಾ ನದಿಯಲ್ಲಿ ಬುಧವಾರ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಅಂದಾಜು 45 ವರ್ಷದ ಗಂಡು ಮೊಸಳೆ ಶನಿವಾರ ಬೆಳಗ್ಗೆ ಯಚ್ಚರೇಶ್ವರ ಮಠದ ಸಮೀಪ ನದಿ ದಂಡೆಯಲ್ಲಿ ಶವವಾಗಿ ಪತ್ತೆಯಾಗಿದೆ. ಇದರಿಂದ ಕಳೆದ ನಾಲ್ಕು ದಿನಗಳಿಂದ ಆತಂಕಿತರಾಗಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಮೊಸಳೆ ಕಾಣಿಸಿಕೊಂಡ ಮರುದಿನ (ಗುರುವಾರ) ಗ್ರಾಮಕ್ಕೆ ಆಗಮಿಸಿದ್ದ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ನಂತರ ಮತ್ತೆ ಮೊಸಳೆ ಕಾಣಿಸಿರಲಿಲ್ಲ. ಮತ್ತೊಮ್ಮೆ ಕಾಣಿಸಿಕೊಂಡರೆ ಮಾತ್ರ ಅದನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಿದ್ದರು. ಸುತ್ತಮುತ್ತಲಿನ ಗ್ರಾಮಗಳ ಜನರು ನದಿಗೆ ಇಳಿಯದಂತೆ ಸಿಬ್ಬಂದಿ ಕಾವಲು ಹಾಕಿದ್ದರು. ಆದರೆ, ಶನಿವಾರ ಬೆಳಗ್ಗೆ ಮೊಸಳೆಯ ಶವ ಪತ್ತೆಯಾಗಿದ್ದು, ಜನರು ನಿರಾಳರಾಗಿದ್ದಾರೆ.
*ಕಾರಣ ನಿಗೂಢ: ಮೊಸಳೆ ಸಾವಿಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಸುಮಾರು 7 ಅಡಿ ಉದ್ದವಿರುವ ಮೊಸಳೆ ದಷ್ಟಪುಷ್ಟವಾಗಿದೆ. ಸಾಮಾನ್ಯವಾಗಿ ಇವು 70 ರಿಂದ 120 ವರ್ಷದವರೆಗೆ ಬದುಕುತ್ತವೆ. ಆದರೆ, ಮಧ್ಯ ವಯಸ್ಸಿನ ಈ ಮೊಸಳೆ ಸಾಯಲು ಕಾರಣವೇನು ಎಂಬುದು ಗೊತ್ತಾಗಿಲ್ಲ. ಇದು ಕಾಣಿಸಿಕೊಂಡ ಜಾಗದಲ್ಲಿ ಮೀನು, ಕಪ್ಪೆ ಸಾಕಷ್ಟು ಪ್ರಮಾಣದಲ್ಲಿದ್ದು, ಆಹಾರಕ್ಕೆ ಕೊರತೆಯಿರಲಿಲ್ಲ. ಹೀಗಾಗಿ ಆಹಾರದಲ್ಲಿ ಯಾರಾದರೂ ವಿಷ ಬೆರೆಸಿ ಸಾಯಿಸಿರಬಹುದು ಎಂಬ ಮಾತು ಕೇಳಿಬಂದವು. ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಶವ ಪರೀಕ್ಷೆ ನಡೆಸಿದ ನಂತರ ನದಿ ದಂಡೆಯ ಮೇಲೆ ಸುಟ್ಟು ಹಾಕಿದರು. ಸೋಮವಾರ ವರದಿ ಬಂದ ಮೊಸಳೆ ಹೇಗೆ ಸಾವನ್ನಪ್ಪಿತು ಎಂಬುದು ತಿಳಿದುಬರಲಿದೆ.