

ಅಳ್ನಾವರ: ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ಹಿರೇಕೆರೆಯ ದಂಡೆ ಮೇಲೆ ಮೊಸಳೆಯೊಂದು ಕಂಡುಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಕೆರೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿದ್ದು ಮೊಸಳೆಯನ್ನು ಸೆರೆ ಹಿಡಿಯುವುದು ಕಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಕಾಶೆನಟ್ಟಿ ಗ್ರಾಮ, ಆಶ್ರಯ ಕಾಲನಿ, ಎಂ.ಸಿ. ಪ್ಲಾಟ್ಗಳು ಮತ್ತು ಹೊಲಗಳಿಗೆ ಹಿರೇಕೆರೆ ಪಕ್ಕದ ರಸ್ತೆ ಮಾರ್ಗದಿಂದ ನಿತ್ಯ ನೂರಾರು ಜನ ಸಂಚರಿಸುತ್ತಾರೆ. ಕೆರೆಯ ಅಕ್ಕಪಕ್ಕ ಬೃಹದಾಕಾರದಲ್ಲಿ ಬೆಳೆದು ನಿಂತಿರುವ ಗಿಡ-ಕಂಟಿಗಳಲ್ಲಿ ಮೊಸಳೆ ಅವಿತು ಸಾರ್ವಜನಿಕರ ಮೇಲೆ ದಾಳಿ ನಡೆಸಿ ಪ್ರಾಣ ಹಾನಿ ಸಂಭವಿಸಿದರೆ ಅದಕ್ಕೆ ನೀರಾವರಿ ಇಲಾಖೆಯೇ ನೇರ ಕಾರಣವಾಗುತ್ತದೆ. ಹೀಗಾಗಿ, ಇಲಾಖೆ ಅಧಿಕಾರಿಗಳು ಗಿಡ-ಕಂಟಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಪ್ರವಾಹ ಬಂದಾಗ ಕೆರೆಯಲ್ಲಿ ಎರಡು ಮೊಸಳೆಗಳು ಕಂಡುಬಂದಿದ್ದವು. ಅದರಲ್ಲಿ ಒಂದು ಹಿರೇಕೆರೆ ಪಕ್ಕದಲ್ಲಿರುವ ಸೇಂಟ್ ಥೆರೆಸಾ ಕಾಲೇಜ್ ಆವರಣದಲ್ಲಿ ಕಂಡುಬಂದಿತ್ತು. ಸ್ಥಳೀಯರು ಅದನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು.