ನಟಿ ತಮನ್ನಾ ಭಾಟಿಯಾ ನೇಮಕ ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದ: ಕೆ.ವಿ.ಮಲ್ಲೇಶ್

kv mallesh
Published on

ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಿಸಿರುವ ರಾಜ್ಯ ಸರಕಾರದ ದೂರದೃಷ್ಟಿಯನ್ನು ಅರಿಯುವಲ್ಲಿ ವಿಫಲರಾಗಿರುವ ವಿಪಕ್ಷಗಳು ಮತ್ತು ಕೆಲವರು ಸುಖಾಸುಮ್ಮನೆ ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಟೀಕಿಸಿದ್ದಾರೆ.

ಜಾಗತೀಕರಣದ ಈ ದಿನಗಳಲ್ಲಿ ಜಾಗತಿಕ ಮಾರುಕಟ್ಟೆ ಹೊಂದಿರುವ ಮೈಸೂರು ಸ್ಯಾಂಡಲ್ ಸೋಪಿನ ಮಾರುಕಟ್ಟೆ ವಿಸ್ತರಣೆ ಮತ್ತು ಪ್ರಚಾರಕ್ಕೆ ರಾಯಭಾರಿಯ ಅಗತ್ಯವಿದೆ. ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದ ಖ್ಯಾತನಾಮರ ಆಯ್ಕೆ ಸಹಜವೇ ಆಗಿದೆ. ಆದರೆ, ಅದನ್ನು ಅರಿಯದ ಕೆಲವರು ಬಾಲಿಷವಾಗಿ ಆರೋಪ ಮಾಡುತ್ತಿದ್ದಾರೆ.

ಕನ್ನಡದ ಅಸ್ಮಿತೆ, ಕನ್ನಡಿಗರಿಗೆ ಅವಕಾಶ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿವೆ. ಆದರೆ, ಔದ್ಯಮಿಕ ದೃಷ್ಟಿಯಿಂದ ಸರ್ಕಾರದ ನಡೆ ಮೆಚ್ಚುವಂತದ್ದು.

ಸಚಿವ ಎಂ.ಬಿ. ಪಾಟೀಲ್ ಹೇಳಿರುವಂತೆ ತಮನ್ನಾ ಅವರಿಗೂ ಮುಂಚೆ ಕನ್ನಡದ ಖ್ಯಾತನಾಮರಾದ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಪೂಜಾ ಹೆಗಡೆ, ಕಿಯಾರ ಅಡ್ವಾಣಿ ಅವರುಗಳನ್ನು ಸಂಪರ್ಕಿಸಿ ಅವರೆಲ್ಲ ಒಲ್ಲೆ ಎಂದ ಮೇಲೆಯೇ ತಮನ್ನಾ ಅವರನ್ನು ಸಂಪರ್ಕಿಸಿ ರಾಯಭಾರತ್ವ ನೀಡಲಾಗಿದೆ. ಕನ್ನಡದ ನಟಿಯರು ಈಗಾಗಲೇ ಬೇರೆ ಬೇರೆ ಸೌಂದರ್ಯ ವರ್ಧಕಗಳಿಗೆ ರಾಯಭಾರಿ ಆಗಿರುವುದರಿಂದ ಅವರು ಇನ್ನೂ ಎರಡು ವರ್ಷಗಳ ಕಾಲ ಸಿಗದಿರುವ ಹಿನ್ನೆಲೆ ತಮನ್ನಾ ಅವರನ್ನು ಆಯ್ಕೆಯಾಡಲಾಗಿದೆ ಎಂದು ಸ್ವತಃ ಸಚಿವರೇ ಉತ್ತರಿಸಿದರೂ ಟೀಕೆ ಮಾಡುತ್ತಿರುವುದು ಸರಿಯಲ್ಲ.

ಅಲ್ಲದೆ, ಸಚಿವರು ಹೇಳಿರುವಂತೆ ಕೆಎಸ್‌ಡಿಎಲ್‌ನ ವಾರ್ಷಿಕ ವಹಿವಾಟು 1,700 ಕೋಟಿ ರೂ.ಗಳಾಗಿದೆ. ಇದರಲ್ಲಿ ಕರ್ನಾಟಕದ ಪಾಲು 320 ಕೋಟಿ ರೂ.ಗಳಿದ್ದರೆ ಮಿಕ್ಕ ಪಾಲೆಲ್ಲವೂ ಕರ್ನಾಟಕದಿಂದ ಆಚಿನದೇ. ಇದರಿಂದಲೇ ಅರ್ಥವಾಗುತ್ತದೆ ಕೆಎಸ್‌ಡಿಎಲ್‌ನ ಮಾರುಕಟ್ಟೆಯ ಶಕ್ತಿ ಏನೆಂಬುದು.

ಅಲ್ಲದೆ, ಮುಂದಿನ ಐದು ವರ್ಷಗಳಲ್ಲಿ ಕಂಪನಿಯು 5000 ಕೋಟಿ ರೂ.ಗಳ ವಹಿವಾಟು ನಿರೀಕ್ಷೆ ಹೊಂದಿದ್ದು, ಅದನ್ನು ತಲುಪಬೇಕಾದರೆ ಜಾಗತಿಕ ಸ್ಪರ್ಧೆ ಅನಿವಾರ್ಯವಾಗಿದೆ. ಮೈಸೂರು ಸ್ಯಾಂಡಲ್ ಸೋಪ್ ಮತ್ತು ಅದರ ಉತ್ಪನ್ನಗಳು ಜಾಗತಿಕ ಬ್ರ್ಯಾಂಡ್‌ಗೆ ಸಮಾನವಾದುದು. ಜಗತ್ತಿಗೆ ಹೆಚ್ಚು ತೆರೆದುಕೊಂಡಷ್ಟು ಲಾಭ ಕುರುನಾಡಿಗೆ ಎಂಬುದನ್ನು ಯಾರೂ ಮರೆಯಬಾರದು. ನಟಿ ತಮನ್ನಾ ನೇಮಕ ಪ್ರಚಾರ ತಂತ್ರಗಾರಿಕೆಯ ಭಾಗವೇ ಹೊರತು ಬೇರೇನಿಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು. ನಮ್ಮ ನೆಲದ ಎಷ್ಟೋ ಖ್ಯಾತನಾಮರು ಬೇರೆ ರಾಜ್ಯಗಳ, ದೇಶಗಳ ಕಂಪನಿಗಳ ಉತ್ಪನ್ನಗಳಿಗೆ ರಾಯಭಾರಿಗಳಾಗಿಲ್ಲವೇ ಇದೂ ಅದೇ ರೀತಿ ಎಂಬುದನ್ನು ಎಲ್ಲರೂ ಅರಿಯಬೇಕು. ಸಂಕುಚಿತ, ಸೀಮಿತ ಮನೋಭಾವ ಬಿಟ್ಟು ನಮ್ಮ ಅಸ್ಮಿತೆಯಂತಿರುವ ಮೈಸೂರು ಸ್ಯಾಂಡಲ್ ಸೋಪ್‌ ಅನ್ನು ಜಾಗತಿಕ ಮಾರುಕಟ್ಟೆಯ ನಾಯಕನನ್ನಾಗಿ ಮಾಡುವ ಗುರಿ ನಮ್ಮದಾಗಬೇಕು. ಅದಕ್ಕೆ ತಮನ್ನಾ ಆದರೇನು, ಬೇರೆಯವರಾದರೇನು. ಕಂಪನಿಯ ಗುರಿ 5 ಸಾವಿರ ಕೋಟಿ ರೂಪಾಯಿ ತಲುಪಿದ ಮೇಲೆ ವಿದೇಶಿಯರೇ ರಾಯಭಾರಿಯಾದರೂ ಸರಿಯೇ. ಅದು ಕರುನಾಡಿನ ಗರ್ವವಲ್ಲವೇ. ಈ ನೆಲದ, ಈ ಪರಂಪರೆಯ ಮಾರ್ಜಾಲವೊಂದು ಜಾಗತಿಕ ಉತ್ಪನ್ನವಾಗುವುದು ಕನ್ನಡಿಗರಿಗೆ ಹೆಮ್ಮೆಯಲ್ಲವೇ?

ಟೀಕೆ ಮಾಡುವವರೆಲ್ಲ ಮೊದಲು ಕೆಎಸ್‌ಡಿಎಲ್ ಉತ್ಪನ್ನಗಳನ್ನು ಬಳಸಲಿ. ಕನ್ನಡದ ಅಸ್ಮಿತೆ ಬಗೆಗಿನ ಅವರ ಮಾತಿನ ಪ್ರೀತಿಯನ್ನು ಬಳಕೆಯ ಮೂಲಕ ಸಾದರಪಡಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net