

ವಿಜಯಪುರ: ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಶೆಡ್ ಗಿರಾಕಿ ಎಂದು ಸಂಬೋಧಿಸಿರುವ ಸಚಿವ ಎಂ.ಬಿ. ಪಾಟೀಲರ ನಡೆ ಖಂಡಿಸುವುದಾಗಿ ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮೀಸೆ ತಿಳಿಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಡಾ.ಎಂ.ಬಿ. ಪಾಟೀಲರು ವಿರೋಧ ಪಕ್ಷದ ನಾಯಕರಿಗೆ ಈ ರೀತಿ ಪದ ಬಳಸಿರುವುದು ಅಕ್ಷಮ್ಯ ಅಪರಾಧ. ಆ ಪದ ಪ್ರಯೋಗಿಸುವ ಮೂಲಕ ಅವರು ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ಅವಮಾನಿಸಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.
ಎಂ.ಬಿ. ಪಾಟೀಲರ ಮಾತುಗಳು ಕಾಂಗ್ರೆಸ್‌ನ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಮಾತೆತ್ತಿದರೆ ದಲಿತರ ಬಗ್ಗೆ ಮಾತನಾಡುವ ಇವರು ಒಬ್ಬ ದಲಿತ ನಾಯಕ ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕನಾಗಿರುವುದನ್ನು ಸಹಿಸುತ್ತಿಲ್ಲ. ಇದೇ ಮೊದಲೇನಲ್ಲ. ಈ ಹಿಂದೆಯೂ ಕಾಂಗ್ರೆಸ್ ದಲಿತರ ಬಗ್ಗೆ ಕೆಟ್ಟದಾಗಿ ನಡೆದುಕೊಂಡಿದೆ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನೇ ಸೋಲಿಸಿದವರು ಇವರು. ಬಾಬು ಜಗಜೀವನ ರಾಂ ಅವರು ಪ್ರಧಾನಿಯಾಗುವುದನ್ನು ತಪ್ಪಿಸಿದವರು ಇದೇ ಕಾಂಗ್ರೆಸ್‌ನವರು ಎಂದು ಮಂಜುನಾಥ ಮೀಸೆ ಕಿಡಿಕಾರಿದರು.
ದಲಿತರ ಕಲ್ಯಾಣಕ್ಕೆ ಇರುವ 11 ಸಾವಿರ ಕೋಟಿ ಹಣವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಅದನ್ನು ವಾಪಸ್ ತರುವ ನಿಟ್ಟಿನಲ್ಲಿ ಡಾ.ಎಂ.ಬಿ. ಪಾಟೀಲ ಕೆಲಸ ಮಾಡಲಿ ಎಂದರು.
ಚಿದಾನಂದ ಛಲವಾದಿ ಮಾತನಾಡಿ, ನಾವು ದಲಿತರು ಶೆಡ್‌ನಲ್ಲಿ ಬೆಳೆದವರು. ನಾರಾಯಣಸ್ವಾಮಿ ಅವರು ವಿರೋಧ ಪಕ್ಷದ ನಾಯಕರಾಗಿ ಪ್ರಶ್ನೆ ಮಾಡುವುದು ತಪ್ಪಾ?. ಅವರ ಮೊದಲು ಕಾಂಗ್ರೆಸ್‌ನಲ್ಲಿ ಇದ್ದರು. ಅವರಿಗೆ ಯಾವ ಹುದ್ದೆಯನ್ನೂ ನೀಡಲಿಲ್ಲ. ಈಗ ಬಿಜೆಪಿ ಅವರ ವ್ಯಕ್ತಿತ್ವ ಗುರುತಿಸಿ ಗೌರವ ನೀಡಿದೆ ಎಂದರು.
ಮುಖಂಡರಾದ ಭೀಮಣ್ಣ ಮೇಲಿನಮನಿ, ಟಿ. ಸಿದ್ದಲಿಂಗಪ್ಪ ಮಖಣಾಪುರ, ಪುನೀತ್ ಕಾಂಬ್ಳೆ ಮತ್ತಿತರರಿದ್ದರು.