ಚಂದ್ರಯಾನ ಯಶಸ್ಸಿನ ಲಾಭ ಯತ್ನಕ್ಕೆ ಟೀಕೆ

D BASAVARAJ congress DVG
Published on

ದಾವಣಗೆರೆ: ಚಂದ್ರಯಾನ -3ರ ಸಂಪೂರ್ಣ ಯಶಸ್ಸು ಇಸ್ರೋ ವಿಜ್ಞಾನಿಗಳಿಗೆ ಸಲ್ಲುತ್ತದೆ. ಆದರೆ, ಪ್ರಧಾನಿ ಮೋದಿ ಅವರು ಇದರ ರಾಜಕೀಯ ಲಾಭ ಪಡೆಯಲು ಹವಣಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

ವಿಕ್ರಂ ಲ್ಯಾಂಡರ್ ಬುಧವಾರ ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗುವ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾದ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಲ್ಯಾಂಡಿಂಗ್ ಆಗಲು ಕೆಲವೇ ನಿಮಿಷಗಳಿದ್ದಾಗ ಕಾಣಿಸಿಕೊಂಡು ರಾಜಕೀಯ ಮಾರ್ಕೇಟ್ ಮಾಡಿಕೊಳ್ಳಲು ಯತ್ನಿಸಿರುವುದನ್ನು ದೇಶದ ಜನತೆ ನೋಡಿದ್ದಾರೆ.

ಚಂದ್ರಯಾನ ಮೂರರ ಯಶಸ್ಸಿನ ಲಾಭ ಹಾಗೂ ಕೀರ್ತಿ ಎಲ್ಲವೂ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಮತ್ತು ಅಸಂಖ್ಯಾತ ವಿಜ್ಞಾನಿಗಳ ತಂಡಕ್ಕೆ ಸಲ್ಲಬೇಕು. ಇದರಲ್ಲಿ ಪ್ರಧಾನಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ದೇಶದ ಜನ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಕೇಂದ್ರ ಸರ್ಕಾರ ಬಾಹ್ಯಾಕಾಶ ಸಂಶೋಧನೆಗೆ ಬಜೆಟ್ನಲ್ಲಿ ಶೇ.8ರಷ್ಟು ಅನುದಾನ ಕಡಿತಗೊಳಿಸಿದೆ. ಚಂದ್ರಯಾನ-3ರ ಅನುದಾನದಲ್ಲಿ ಶೇ.38ರಷ್ಟು ಕಡಿತಗೊಳಿಸಿದ್ದು ಬಾಹ್ಯಾಕಾಶ ವಿಜ್ಞಾನಿಗಳಿಗೆ ಬೇರೆ ದೇಶಗಳಿಗೆ ಹೋಲಿಸಿದರೆ ಐದನೇ ಒಂದು ಭಾಗದಷ್ಟು ಮಾತ್ರ ವೇತನ ನೀಡಲಾಗುತ್ತಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ಅವರು ಹೇಳಿದ್ದಾರೆ. ಸಂಶೋಧನೆಗಳಿಗೆ, ವಿಜ್ಞಾನಿಗಳಿಗೆ ಎಂದೂ ಪ್ರೋತ್ಸಾಹ ನೀಡದ ಪ್ರಧಾನಿ ಮೋದಿಗೆ ಚಂದ್ರಯಾನದ ಯಶಸ್ಸಿನ ಕ್ರೆಡಿಟ್ ಪಡೆಯಲು ಯಾವುದೇ ನೈತಿಕ ಹಕ್ಕು ಇಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net