

ಬಳ್ಳಾರಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಬಳ್ಳಾರಿ ನಗರದಲ್ಲಿ ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘ, ಹಮಾಲಿ ಕಾರ್ಮಿಕರ ಸಂಘ ಹಾಗೂ ಕಟ್ಟಡ ಕಾರ್ಮಿಕ ಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ 5.80 ಲಕ್ಷ ನೋಂದಾಯಿತ ಇಎಸ್‌ಐ ಕಾರ್ಮಿಕರಿದ್ದು 2018 ರಲ್ಲಿ 100 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿದರೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷತೆಯಿಂದ ಇದುವರೆಗೂ ಆರಂಭಗೊಂಡಿಲ್ಲ. ಮಾಸಿಕ 1.40 ಕೋಟಿ ರೂ. ಹಣವನ್ನು ಇಎಸ್‌ಐಗೆ ಸಂದಾಯ ಮಾಡಲಾಗುತ್ತಿದೆ ಆದರೂ ಕಾರ್ಮಿಕರಿಗೆ ಪಿಎಸ್‌ಐ ಆರೋಗ್ಯ ಸೌಲಭ್ಯ ದೊರೆಯುತ್ತಿಲ್ಲ. ಕೂಡಲೇ ಇಎಸ್‌ಐ ಆಸ್ಪತ್ರೆಯನ್ನು ಆರಂಭ ಮಾಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರ ಆರೋಗ್ಯ ಚಿಕಿತ್ಸೆಗಾಗಿ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಸೇರಿ ಕೇವಲ ಒಂದೇ ಆಸ್ಪತ್ರೆಯ ಒಪ್ಪಂದ ಮಾಡಿಕೊಂಡಿರುವುದರಿಂದ ಆಸ್ಪತ್ರೆಯ ಚಿಕಿತ್ಸೆಯ ಸೌಲಭ್ಯ ಕಾರ್ಮಿಕರಿಗೆ ದೊರೆಯುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಸಹಾಯಧನ ನೀಡುತ್ತಿಲ್ಲ. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಹಣವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಬೇಕು. ಹಮಾಲಿ ಕಾರ್ಮಿಕರಿಗೆ ವಿಮಾ ಸೌಲಭ್ಯ ಹಾಗೂ ಪಿಂಚಣಿ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವಂತಹ ಲೋಕಸಭಾ ಸದಸ್ಯರು ಕಳೆದ ಐದು ವರ್ಷದಿಂದ ಆಯ್ಕೆಯಾದ ಜನರಿಂದ ದೂರವಾಗಿದ್ದಾರೆ. ಕಾರ್ಮಿಕರಿಗೆ ಮತ್ತು ಜಿಲ್ಲೆಯ ಜನತೆಗೆ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ವಿಫಲರಾಗಿದ್ದುವನ್ನು ಖಂಡಿಸಿದರು.
ಮುಖಂಡರಾದ ಗಂಗಾಧರ್ ಪತ್ತಾರ್, ಗುರುಸಿದ್ಧಮೂರ್ತಿ, ಚಂದ್ರಾಕುಮಾರಿ, ಜಿ.ಸತ್ಯಬಾಬು, ಜೆ.ಎಂ.ಚನ್ನಬಸಯ್ಯ, ತಿಪ್ಪೇಸ್ವಾಮಿ ಮಳೆಮಠ, ಮಲಿಯಪ್ಪ, ಹೊನ್ನೂರು ಸಾಬ್, ಬಿ.ದೇವಣ್ಣ, ತಿಪ್ಪಯ್ಯ, ಓಬಳೇಶಪ್ಪ , ಸುರೇಶ ಭಾಗವಹಿಸಿದ್ದರು.