ಶಹಬ್ಬಾಷ್‌ಗಿರಿ ಪಡೆಯಲು ಕಾಂಗ್ರೆಸ್ ಸಚಿವರು, ಶಾಸಕರ ಸರ್ಕಸ್: ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ವ್ಯಂಗ್ಯ

H.T.Manju
Published on

ಮಂಡ್ಯ: ಐದು ವರ್ಷ ಸಚಿವ ಸ್ಥಾನ ಉಳಿಸಿಕೊಳ್ಳಲು ಮತ್ತು ಸಿಎಂ ಸಿದ್ದರಾಮಯ್ಯ ಅವರಿಂದ ಶಹಬ್ಬಾಷ್‌ಗಿರಿ ಪಡೆಯಲು ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಪೂರ್ವಯೋಚಿತವಾಗಿ ಮಾತನಾಡಿಕೊಂಡು ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಸದನದಲ್ಲಿ ಮುಗಿಬಿದ್ದಿದ್ದಾರೆ ಎಂದು ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೇ ಒಬ್ಬ ಶಾಸಕನಾಗಲು ಪಕ್ಷದ ನೆರಳು, ಆ ಪಕ್ಷದ ನಾಯಕನ ವರ್ಚಸ್ಸು ಬೇಕು. ಅವರು ‘ಬಿ’ ಫಾರ್ಮ್ ನೀಡಿದರೆ ಮಾತ್ರ ಶಾಸಕನಾಗಲು ಸಾಧ್ಯ. ಇದನ್ನು ಚಲುವರಾಯಸ್ವಾಮಿ ಮೊದಲು ತಿಳಿಯಬೇಕು. ನಮ್ಮ ಕೆ.ಆರ್.ಪೇಟೆ ತಾಲೂಕಿನಲ್ಲೂ ಬಹಳ ಹಿಂದಿನಿಂದಲೂ ಸರ್ಕಾರದ ಕೆಲ ಇಲಾಖೆಗಳಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದವರನ್ನು ತೆಗೆದು ಅವರ ಕಡೆಯವರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಶಾಸಕರ ಮಾತನ್ನೂ ಕೇಳುತ್ತಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಮಾತನಾಡಿ, ಎಚ್‌ಡಿಕೆ ಅಂದು ನಿಮ್ಮನ್ನು ಬೆಳೆಸಿದರು. ಆದರೆ ಇಂದು ಅಧಿಕಾರ ಸಿಕ್ಕಿದೆ ಎಂದು ಸಹಾಯ ಮಾಡಿದವರನ್ನೇ ಹೀಯಾಳಿಸುತ್ತಿದ್ದೀರಿ. ಮೆರೆದವರೆಲ್ಲ ಏನೇನೋ ಆಗಿದ್ದಾರೆ. ಎಚ್‌ಡಿಕೆ ಅವರು ಬಜೆಟ್ ಮಂಡಿಸಿದಾಗ ಮಂಡ್ಯ ಹಾಗೂ ಹಾಸನ ಬಜೆಟ್ ಎಂದು ಟೀಕೆ ಮಾಡಿದ್ದಿರಿ. ಅದೇ ನಿಮ್ಮ ಸಿಎಂ ಸಿದ್ದರಾಮಯ್ಯ ಅವರು ಮಂಡ್ಯ ಜಿಲ್ಲೆಗೆ 5 ಪೈಸೆನೂ ನೀಡಿಲ್ಲ. ನೀವು ಗೆದ್ದಿರುವುದು ಕೇವಲ 4 ಸಾವಿರ ಮತಗಳಿಂದ ಮಾತ್ರ. ಅದು ಗ್ಯಾರಂಟಿ ಭರವಸೆಗಳಿಂದ ಎಂಬುದನ್ನು ಮರೆಯಬೇಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net