ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನಿದೆ?: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನೆ

karnataka-agriculture-minister-cheluvarayaswamy-meet-farmers.jpg
Published on

ಮಂಡ್ಯ: ಚುನಾವಣೆಯಲ್ಲಿ ವೋಟು ಹಾಕಿಸಿಕೊಳ್ಳುವುದಕ್ಕೆ ಏನು ಬೇಕೋ ಅದನ್ನಷ್ಟೇ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಾರೆ. ಅದನ್ನು ಹೊರತುಪಡಿಸಿ ಜಿಲ್ಲೆಗೆ ಅವರ ಕೊಡುಗೆ ಏನಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್‌ಡಿಕೆ ಸಾಧನೆ ಏನೆಂದು ಎಲ್ಲರಿಗೂ ಗೊತ್ತಿದೆ. ಮಂಡ್ಯ ಸೇರಿದಂತೆ ಕಾವೇರಿ ಅಚ್ಚುಕಟ್ಟು ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಏನು. ಅವರ ತಂದೆ ಕೊಡುಗೆಯನ್ನೇ ಎಷ್ಟು ಸಲ ಹೇಳುತ್ತಾರೆ. ಎಚ್.ಡಿ.ದೇವೇಗೌಡ ಅವರು ಕೊಡುಗೆ ಕೊಟ್ಟಾಗಿದೆ, ಅದಕ್ಕೆ ಜಿಲ್ಲೆಯ ಜನರು ಕೃತಜ್ಞತೆ ಸಲ್ಲಿಸಿಯಾಗಿದೆ. ದೇವೇಗೌಡ ಅವರ ಕೊಡುಗೆ ಮೇಲೆ ಎಚ್‌ಡಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಸಂಕ್ರಾಂತಿ ವೇಳೆಗೆ ಕಾಂಗ್ರೆಸ್ ಸರ್ಕಾರ ಬೀಳುತ್ತದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾತ್ರಿಯಲ್ಲ ಕನಸು ಕಾಣುವುದಕ್ಕೆ ಹೇಳಿ. ಐದು ವರ್ಷ ಸರ್ಕಾರದ ಅವಧಿ ಮುಗಿದ ಮೇಲೆ ಗೊತ್ತಾಗುತ್ತದೆ. ಕಾಂಗ್ರೆಸ್‌ನಲ್ಲಿ ಮೂರು ಡಿಸಿಎಂ ಕೂಗು ವಿಚಾರವನ್ನು ಪಕ್ಷ ನೋಡಿಕೊಳ್ಳುತ್ತದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ ವಾಪಾಸ ವಿಚಾರಕ್ಕೆ ಸಂಬಂಧಿಸಿದಂತೆ ಆ ರೀತಿಯ ನಿರ್ಧಾರ ಆಗಿರುವ ಬಗ್ಗೆ ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ಬೆಂಗಳೂರಿನ ಸಚಿವರು. ಅವರ ಬಳಿ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ. ಆದ್ದರಿಂದ ಗೊತ್ತಿಲ್ಲದ ವಿಚಾರ ನಾನು ಮಾತನಾಡುವುದಿಲ್ಲ. ಶಿವಮೊಗ್ಗ ಗಲಾಟೆಗೆ ಬಿಜೆಪಿಯೇ ಪಿತಾಮಹ. ಆರ್‌ಎಸ್‌ಎಸ್, ಬಜರಂಗದಳದಲ್ಲಿ ಒಳ್ಳೆಯವರಿದ್ದಾರೆ. ಆದರೆ ರಾಜಕಾರಣದ ಲಾಭ ಪಡೆಯಲು ಬಿಜೆಪಿ ಎರಡು ಸಂಸ್ಥೆ ಉಪಯೋಗಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net