ಎಂ.ಕೆ.ಸ್ಟಾಲಿನ್ ಸ್ನೇಹಕ್ಕೆ ಕರ್ನಾಟಕ ಬಲಿ: ಮಾಜಿ ಸಚಿವ ಸಿ.ಟಿ.ರವಿ ವಾಗ್ದಾಳಿ

1
Published on

ಮಂಡ್ಯ: ಇಂಡಿಯಾ ಒಕ್ಕೂಟದಲ್ಲಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸ್ನೇಹಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಬಲಿ ಕೊಡುತ್ತಿದೆ. ಕಾಂಗ್ರೆಸ್ ಮಂಡ್ಯ ಜನರಿಗೆ ಶಾಪ, ತಮಿಳುನಾಡಿಗೆ ವರ ಎಂದು ಮಾಜಿ ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಲಾಭಕ್ಕೆ ರಾಜ್ಯದ ಜನತೆಗೆ ಕಾಂಗ್ರೆಸ್ ಶಾಪವಾಗಿದೆ. ಸಂಕಷ್ಟದ ಸೂತ್ರ ಮರೆತು ನೀರು ಬಿಡಲಗಿದೆ. ಸಂಕಷ್ಟದ ಸೂತ್ರ ಬದಿಗೊತ್ತಿ ರಾಜಕೀಯ ಮಾಡಲಾಗಿದೆ. ಮಾತ್ರವಲ್ಲದೆ ತಮ್ಮ ಪಾಪಕ್ಕೆ ಸೀಲ್ ಹಾಕಿಸಿಕೊಳ್ಳಲು ಆ.22ರಂದು ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಕಾವೇರಿ ಕರ್ನಾಟಕದ ಸ್ವಾಭಿಮಾನದ ಪ್ರತೀಕ ಮಾತ್ರವಲ್ಲ, ನಮ್ಮ ಜೀವನಾಡಿ. ಮಂಡ್ಯ, ಮೈಸೂರು ಭಾಗದ ರೈತರ ಬದುಕನ್ನು ಹಸನು ಮಾಡಿದೆ. ಕಾವೇರಿ ಇಲ್ಲದೇ ಬೆಂಗಳೂರು ಮಹಾನಗರ ಉಳಿಯುವುದಕ್ಕೂ ಆಗಲ್ಲ ಎಂದು ಹೇಳಿದರು.

ಕಾವೇರಿ ವಿವಾದ ಇವತ್ತು ನಿನ್ನೆಯದಲ್ಲ. ಅದಕ್ಕೆ ಶತಮಾನದ ಇತಿಹಾಸವಿದೆ. ಕಾವೇರಿ ನದಿ ನೀರನ್ನು ಸಂಕಷ್ಟದ ಪರಿಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕಾದದ್ದು ಆಳುವ ಸರ್ಕಾರಗಳ ಹೊಣೆ. ವಿಧಾನಸಭಾ ಚುನಾವಣೆಗೂ ಮುಂಚೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಪ್ರಭಾವಿ ಮುಖಂಡರೆಲ್ಲರೂ ಸೇರಿ ಮೇಕೆದಾಟು ಯೋಜನೆಗಾಗಿ ‘ನಮ್ಮ ನೀರು, ನಮ್ಮ ಹಕ್ಕು’ ಎಂದು ಪಾದಯಾತ್ರೆ ಮಾಡಿದರು. ಆದರೂ ಸುಪ್ರೀಂ ಕೋರ್ಟ್ ಮತ್ತು ಸಿಡಬ್ಲುೃಸಿ ಸೂಚನೆಗೆ ಮುನ್ನವೇ ತಮಿಳುನಾಡಿಗೆ ನೀರು ಬಿಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net