ವಾರಾಂತ್ಯದಲ್ಲಿ ಬಂದು ಬಯ್ಯೋದೆ ಕೆಲಸ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ

Minister-N.Cheluvarayaswamy
Published on

ಮಂಡ್ಯ: ಎಚ್.ಡಿ.ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದ್ದರೂ ದೇಶ ಸುತ್ತಿ ಕೆಲಸ ಮಾಡುವುದು ಮುಖ್ಯವಲ್ಲ. ಪ್ರತಿ ವಾರದ ಅಂತ್ಯದಲ್ಲಿ ರಾಜ್ಯಕ್ಕೆ ಬಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಬಯ್ಯುವುದೇ ಕೆಲಸವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಮತ್ತು ಡಿಸಿಎಂ ಅವರನ್ನು ಏಕವಚನದಲ್ಲಿ ಮೂಲಕ ನಿಂದಿಸಲು ಸಂಸತ್ ಸದಸ್ಯ ಸ್ಥಾನ ಹಾಗೂ ಕೇಂದ್ರ ಸಚಿವ ಸ್ಥಾನವನ್ನು ದುಬರ್ಳಕೆ ಮಾಡಿಕೊಳ್ಳುತ್ತಿರುವುದು ಕುಮಾರಸ್ವಾಮಿ ಅವರಿಗೆ ಗೌರವ ತರುವುದಿಲ್ಲ. ಎಚ್‌ಡಿಕೆ ತಪ್ಪುಗಳನ್ನು ಸರಿಪಡಿಸುವ ಕೆಲಸ ಯಾರಿಂದಲೂ ಆಗುತ್ತಿಲ್ಲ. ದೇಶದುದ್ದಕ್ಕೂ ಪ್ರವಾಸ ನಡೆಸಿ, ಸಚಿವ ಸ್ಥಾನಕ್ಕೆ ನ್ಯಾಯ ಸಲ್ಲಿಸಬೇಕಾದ ಕುಮಾರಸ್ವಾಮಿ ಅವರು ವಾರದ ಮೂರು ದಿನ ಸಿಎಂ ಹಾಗೂ ಡಿಸಿಎಂ ನಿಂದಿಸಲು ಬಳಕೆ ಮಾಡಿಕೊಳ್ಳುತ್ತಿರುವುದು ಒಳ್ಳೆಯದಲ್ಲ ಎಂದು ತಿಳಿಹೇಳಿದರು.
ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಯ ಪುನಶ್ಚೇತನಕ್ಕೆ ಅನುದಾನ, ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಅನುಮತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಕ್ಕಲಿಗ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಅದೇ ರೀತಿ 2ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಲು ಸಹಕಾರ ನೀಡಿದ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಲಘುವಾಗಿ ನಿಂದಿಸುತ್ತಾರೆ. ಇಂತಹ ವರ್ತನೆ ಸರಿಯಲ್ಲ. ಅವರು ಬರೀ ಕುಮಾರಸ್ವಾಮಿ ಅಲ್ಲ, ಬದಲಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬದವರು ಎನ್ನುವುದು ನೆನಪಿರಲಿ ಎಂದರು.
ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಡಿ ಹಂಚಿಕೆ ವಿಚಾರವಾಗಿ ಒಂದು ಬಾರಿ ಪ್ರೀತಂ ಗೌಡ ನನ್ನ ಕುಟುಂಬದ ಮರ್ಯಾದೆ ತೆಗೆದ ಎನ್ನುತ್ತಾರೆ. ಮತ್ತೊಂದು ಬಾರಿ ಡಿ.ಕೆ.ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸುತ್ತಾರೆ. ಈಗ ಉದ್ಯಮಿ ಸಿದ್ದಾರ್ಥ ಸಾವಿನ ಬಗ್ಗೆ ಎಸ್.ಎಂ.ಕೃಷ್ಣ ಕುಟುಂಬದ ಹಿತೈಷಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸುವುದು ಕುಮಾರಸ್ವಾಮಿ ಮನಸ್ಥಿತಿಯನ್ನು ಅರ್ಥೈಸುತ್ತದೆ. ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಹೊರಿಸಿದರೆ ಕುಮಾರಸ್ವಾಮಿ ಅವರನ್ನು ದೇವರು ಕ್ಷಮಿಸುವುದಿಲ್ಲ. 1996ರ ಲೋಕಸಭಾ ಚುನಾವಣೆ ಹಾಗೂ ಚನ್ನಪಟ್ಟಣ ಮತ್ತು ರಾಮನಗರದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿಯವರನ್ನು ಡಿ.ಕೆ.ಶಿ ಬೆಂಬಲಿಸಿಲ್ಲವೇ. ಮೈತ್ರಿ ಸರ್ಕಾರದ ಅವಧಿಯಲ್ಲಿ ತಮ್ಮ ಮಗ ನಿಖಿಲ್ ಗೆಲ್ಲಿಸಿಕೊಳ್ಳಲು ಡಿಕೆಶಿ ಬೇಕಿತ್ತು. ಹಾಗಿದ್ದರೆ ಅಂದೇ ಡಿ.ಕೆ.ಶಿವಕುಮಾರ್‌ನಿಂದ ದೂರವಾಗಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಕುರಿತು ಕುಮಾರಸ್ವಾಮಿ ಮಾಡಿದ ಆರೋಪಗಳ ಹಾಗೂ ಅದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಕುಮಾರಸ್ವಾಮಿ ಅವರನ್ನು ನಾಗರಹಾವು ಎಂದು ಕರೆದಿದ್ದನ್ನು ರಾಜ್ಯದ ಜನ ಮರೆತಿಲ್ಲ. ಈಗ ಇಬ್ಬರು ಸೇರಿಕೊಂಡಿದ್ದಾರೆ. ರಾಜ್ಯದ ಜನರು ಬಿಜೆಪಿ ಆಡಳಿತದಿಂದ ರೋಸಿಹೋಗಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರಲು 136 ಶಾಸಕರನ್ನು ಚುನಾಯಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಪ್ರಕ್ರಿಯೆ ಇದನ್ನು ಗೌರವಿಸಬೇಕಾದ ವಿಪಕ್ಷ ನಾಯಕರು ಪದೇ ಪದೇ ಸರ್ಕಾರ ತೆಗೆಯುವ ಮಾತನಾಡುವುದು ಅವರಿಗೆ ಶೋಭೆಯೇ ಎಂದು ವಾಗ್ದಾಳಿ ನಡೆಸಿದರು.
ನಾವು ವಿಪಕ್ಷದಲ್ಲಿದ್ದಾಗ ಪೇ ಸಿಎಂ, ಪಿಎಸ್‌ಐ ಹಗರಣ, ಬಿಟ್ ಕಾಯಿನ್ ಹಗರಣ ಸೇರಿದಂತೆ ಹಲವು ಭ್ರಷ್ಟಾಚಾರಗಳ ವಿರುದ್ದ ಹೋರಾಟ ಮಾಡಿದ್ದೇವು. ಅದೇ ರೀತಿ ನಮ್ಮ ಸರ್ಕಾರದ ತಪ್ಪು ನಡೆಗಳ ವಿರುದ್ದ ಹೋರಾಟ ಮಾಡುವ ಹಕ್ಕು ವಿಪಕ್ಷಗಳಿಗಿದೆ. ಆದರೆ ಮೈಸೂರು ಮುಡಾ ಪ್ರಕರಣವನ್ನು ಹಗರಣವಾಗಿ ಬಿಂಬಿಸುವುದು ಹಲವು ಬಿಜೆಪಿ ನಾಯಕರಿಗೆ ಸರಿಕಾಣುತ್ತಿಲ್ಲ. ಇದು ವಿಪಕ್ಷ ನಾಯಕರಿಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿಷಯಾಧಾರಿತವಾಗಿ ಪಾದಯಾತ್ರೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಅದನ್ನು ಬಿಟ್ಟು ಬಿ.ವೈ.ವಿಜಯೇಂದ್ರ ಹಾಗೂ ನಿಖಿಲ್ ಅವರನ್ನು ರಾಜಕೀಯವಾಗಿ ಬಿಂಬಿಸಲು ಪಾದಯಾತ್ರೆ ನಡೆಸಿದರೆ ನಾವು ಸುಮ್ಮನಿರಬೇಕೇ?. ಪಾದಯಾತ್ರೆ ಬಗ್ಗೆ ಯತ್ನಾಳ್ ಹಾಗೂ ಪ್ರತಾಪ್‌ಸಿಂಹ ಅಸಹನೆ ವ್ಯಕ್ತಪಡಿಸಿಲ್ಲವೇ ಎಂದು ತಿರುಗೇಟು ನೀಡಿದರು.
ಪಾದಯಾತ್ರೆಗೆ ಆರಂಭದಲ್ಲಿ ಅಪಸ್ವರ ತೆಗೆದ ಎಚ್.ಡಿ.ಕುಮಾರಸ್ವಾಮಿ 2ನೇ ದಿನ ವಿಧಿಯಿಲ್ಲದೇ ಬೆಂಬಲ ಸೂಚಿಸಿದರು. ನಮ್ಮ ಸರ್ಕಾರರದ ಬಗ್ಗೆ ಸುಳ್ಳು ಆರೋಪ ಮಾಡುವ ಮೈತ್ರಿ ಪಕ್ಷಗಳ ಕಾಲದ ಹಗರಣಗಳ ಬಗ್ಗೆ ತನಿಖೆ ನಡೆಸುವ ಕಾಲ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗೀಗೌಡ, ಮುಡಾ ಅಧ್ಯಕ್ಷ ನಹೀಂ, ಕೆಡಿಪಿ ನಾಮನಿರ್ದೇಶಿತ ಸದಸ್ಯ ಸಿ.ಎಂ.ದ್ಯಾವಪ್ಪ ಇದ್ದರು.

ಇವೆಂಟ್ ಮ್ಯಾನೇಜ್ಮೆಂಟ್ ಕಾರ್ಯಕ್ರಮ
ರೈತರ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯತೆ ಇಲ್ಲ. ಮಾಜಿ ಸಚಿವ ಪುಟ್ಟರಾಜು ಸ್ವಕ್ಷೇತ್ರದಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಮೂಲಕ ಭತ್ತದ ನಾಟಿ ಕಾರ್ಯಕ್ರಮ ಆಯೋಜಿಸಿದ್ದರು. ಇದರಲ್ಲಿ ಕೇಂದ್ರ ಸಚಿವರು ಭಾಗಿಯಾಗಿದ್ದರು. ಇದರಿಂದ ರೈತರಿಗೆ ಹೊಸ ಮಾದರಿಯ ನಾಟಿ ಕಲಿಸಲು ಮುಂದಾಗಿರಬಹುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ನಾನು ಮೂಲತಃ ಕೃಷಿಕ ಕುಟುಂಬದವನು ಟ್ರಾೃಕ್ಟರ್ ಓಡಿಸುತ್ತೇನೆ, ಉಳುಮೆ ಮಾಡುತ್ತೇನೆ. ಆದರೆ ನೇಗಿಲು ಕಟ್ಟುವುದನ್ನು ಸ್ವಲ್ಪ ಮರೆತಿದ್ದೇನೆ. ಕುಮಾರಸ್ವಾಮಿ ಕೆಲವರನ್ನು ಮೆಚ್ಚಿಸಲು ಹೊಸ ಮಾದರಿ ಕಬ್ಬು ಮತ್ತು ಭತ್ತ ನಾಟಿಗೆ ಚಾಲನೆ ನೀಡಿರಬಹುದು ಎಂದು ಟೀಕಿಸಿದರು.

ಮಧ್ಯರಾತ್ರಿ ಕರೆಯಿರಿ ಬರ್ತಾರೆ
ಪ್ರಗತಿ ಪರಿಶೀಲನಾ ಸಭೆಗೆ ಕುಮಾರಸ್ವಾಮಿ ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿ ಚಲುವರಾಯಸ್ವಾಮಿ, ಸತ್ಯ ಹೇಳಿದರೆ ಕೆಲವರಿಗೆ ಮೆಣಸಿನಕಾಯಿ ಇಟ್ಟಂತೆ ಆಗುತ್ತಾಗುತ್ತದೆ. ಹಿಂದೆ ಸಂಸದರಾಗಿದ್ದಾಗ, ಮುಖ್ಯಮಂತ್ರಿ ಆಗಿದ್ದಾಗ ರಾಮನಗರದಲ್ಲಿ ಸಭೆ ನಡೆಸಿರುವ ಮಾಹಿತಿ ಅರಿತರೇ ಸತ್ಯಾಂಶ ತಿಳಿಯುತ್ತದೆ. ಕುಮಾರಸ್ವಾಮಿ ಅವರಿಗೆ ರಾಜಕೀಯದ ಸಭೆ ಸಮಾರಂಭಗಳಲ್ಲಿ ಇರುವ ಆಸಕ್ತಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಇಲ್ಲ. ರಾಜಕೀಯ ಸಭೆ ಎಂದರೆ ಮಧ್ಯರಾತ್ರಿ ಕರೆದರೂ ಬರುತ್ತಾರೆ ಎಂದು ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net