ಮನ್‌ಮುಲ್ ಅಧಿಕಾರಕ್ಕಾಗಿ ಕಾಂಗ್ರೆಸ್ ಕುತಂತ್ರ: ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ವಾಗ್ದಾಳಿ

1 (1)
Published on

ಮಂಡ್ಯ: ಮನ್‌ಮುಲ್‌ನ ಬಿಜೆಪಿ-ಜೆಡಿಎಸ್ ಸದಸ್ಯರನ್ನು ಅಮಾನತುಗೊಳಿಸಿ ಕುತಂತ್ರದಿಂದ ಅಧಿಕಾರ ಹಿಡಿಯಲು ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಆರೋಪಿಸಿದರು.

ವಾಮಮಾರ್ಗದಲ್ಲಿ ಮಂಡ್ಯ ಹಾಲು ಒಕ್ಕೂಟದ ಆಡಳಿತ ಹಿಡಿಯಲು ಕಾಂಗ್ರೆಸ್ ಷಡ್ಯಂತ್ರ ರೂಪಿಸುತ್ತಿದೆ.

ಇಂತಹ ಬೆಳವಣಿಗೆಯನ್ನು ಸಹಿಸುವುದಿಲ್ಲ. ಒಂದು ವೇಳೆ ಇಂತಹ ಧೋರಣೆ ಅನುಸರಿಸಿದಲ್ಲಿ ಕಾನೂನು ಮತ್ತು ಬಹಿರಂಗವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲಾಡಳಿತಕ್ಕೆ ಸಂಬಂಧಿಸಿದಂತೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆದರೆ ಈಗ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜಿಲ್ಲಾಡಳಿತ ಪ್ರತೀ ಹಂತದಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಜಿಲ್ಲೆಯ ಜನರು ಅವರಿಗೆ ಚಿಕ್ಕ ವಯಸ್ಸಿನಲ್ಲೇ ಶಾಸಕರು, ಸಂಸದರನ್ನಾಗಿ ಮಾಡಿದ್ದಾರೆ. ಸಧ್ಯ ಉಸ್ತುವಾರಿ ಸಚಿವರಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಿ. ಅದಕ್ಕೆ ನಮ್ಮ ಸಹಕಾರವಿದೆ. ಅದು ಬಿಟ್ಟು ಇಂತಹ ಕ್ಷುಲ್ಲಕ ರಾಜಕಾರಣ ಮಾಡಿದ್ದೇ ಆದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

ಅಧಿಕಾರ ಎಂದಿಗೂ ಮತ್ತು ಯಾರಿಗೂ ಶಾಶ್ವತವಲ್ಲ. ಇಂದು ಇರುತ್ತದೆ, ನಾಳೆ ಹೋಗುತ್ತದೆ. ಅಧಿಕಾರವಿದ್ದಾಗ ಒಳ್ಳೆಯ ಕೆಲಸ ಮಾಡಬೇಕು. ಜನರಿಗೆ ಒಳಿತಾಗುವ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ. ಅದು ಬಿಟ್ಟು ಕೆಟ್ಟ ಆಡಳಿತಕ್ಕೆ ಕೈಹಾಕುವಂತಹ ಕೆಲಸ ಅವರಿಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ 65 ಜನ ಶಾಸಕರು ವಿರೋಧ ಪಕ್ಷದ ನಾಯಕರೇ. ಎಲ್ಲರೂ ಸದನದಲ್ಲಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಿದ್ದಾರೆ. ಸರ್ಕಾರ ಅದನ್ನು ಸಹಿಸದೆ ಅಮಾನತು ಮಾಡುಂತಹ ಕ್ರಮಕ್ಕೆ ಮುಂದಾಗಿದೆ. ಇನ್ನು ಕೇಂದ್ರ ಸರ್ಕಾರ ರಾಜ್ಯದ ಪಾಲಿಗೆ ನೀಡುವ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳನ್ನೂ ಸರಿ ಸಮನಾಗಿ ನೋಡಿಕೊಳ್ಳಬೇಕಾಗಿದೆ. ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನೀಡಿದಲ್ಲಿ ಬೇರೆ ರಾಜ್ಯದವರೂ ಸಹ ನಮಗೂ ಅಕ್ಕಿ ನೀಡುವಂತೆ ಕೇಳುತ್ತಾರೆ. ಆಗ ಎಲ್ಲಿಂದ ಅಕ್ಕಿ ಕೊಡುವುದು ಎಂದು ಅಕ್ಕಿ ಕೊಡುತ್ತಿಲ್ಲ ಎಂದು ಕಾಂಗೆಸ್ಸಿಗರು ಮಾಡುತ್ತಿರುವ ಆರೋಪಕ್ಕೆ ತಿರುಗೇಟು ನೀಡಿದರು.

ಒಂದೆಡೆ ಅತಿವೃಷ್ಠಿ, ಮತ್ತೊಂದೆಡೆ ಅನಾವೃಷ್ಠಿ ಎದುರಾಗಿದೆ. ಬರಗಾಲ ಇರುವಂತಹ ಕಡೆಗಳಲ್ಲಿ ಹೆಚ್ಚುವರಿ ಅಕ್ಕಿ ನೀಡಬೇಕಾಗಿರುತ್ತದೆ. ಅದಕ್ಕಾಗಿ ಸಂಗ್ರಹ ಮಾಡಬೇಕು. ಜತೆಗೆ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಹೆಚ್ಚಳವಾಗದಂತೆ ಕಾಯ್ದುಕೊಳ್ಳುವ ಅಗತ್ಯತೆ ಇದೆ. ಈ ಎಲ್ಲ ಕಾರಣದಿಂದಾಗಿ ಅಕ್ಕಿ ದಾಸ್ತಾನು ಮಾಡಲಾಗಿದೆ. ಇದನ್ನು ತಿಳಿಯದ ಕಾಂಗ್ರೆಸ್ಸಿಗರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪ್ರಭಾರಿ ಜಗದೀಶ್ ಹಿರೇಮನಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮಂಡ್ಯ ಹಾಲು ಒಕ್ಕೂಟದಲ್ಲಿ ನಮ್ಮ ಸದಸ್ಯರನ್ನು ಅಮಾನತು ಮಾಡಿ ಅಕಾರ ಹಿಡಿಯುವ ಧೋರಣೆ ಸರಿಯಲ್ಲ. ಬೆಳಗ್ಗೆ ಅಮಾನತ್ತು ಮಾಡುವುದು, ಸಂಜೆ ಅದನ್ನು ವಾಪಸ್ ತೆಗೆದುಕೊಳ್ಳುವು ಎಂದರೆ ರಾಜಕೀಯವಲ್ಲವೇ ಎಂದು ಪ್ರಶ್ನಿಸಿದರು.

ಏಳು ದಿನಗಳ ಮುನ್ನ ನೋಟೀಸ್ ನೀಡಬೇಕು. 48 ಗಂಟೆಗೂ ಮುನ್ನ ಅವರ ಬಗ್ಗೆ ಆರೋಪಗಳು ಸಾಬೀತಾಗಬೇಕು. 10 ರಿಂದ 15 ವರ್ಷದ ಹಿಂದೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿರುವ ಪ್ರಕರಣವನ್ನೇ ಗುರಿಯಾಗಿಸಿಕೊಂಡು ಅಮಾನತು ಮಾಡಿ ಅಧಿಕಾರ ಹಿಡಿಯುವುದು ಕಾಂಗ್ರೆಸ್‌ಗೆ ಶೋಭೆ ತರುವುದಿಲ್ಲ. ಒಂದು ವೇಳೆ ಈ ರೀತಿ ಮಾಡಿದಲ್ಲಿ ಮನ್‌ಮುಲ್ ಮುಂದೆ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮನ್‌ಮುಲ್ ನಿರ್ದೇಶಕಿ ರೂಪಾ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net