ಮತಕ್ಕಾಗಿ ಮಾತ್ರ ದಲಿತರನ್ನು ಓಲೈಸುತ್ತಿರುವ ಕಾಂಗ್ರೆಸ್: ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಟೀಕೆ

Criticism of BJP against Congress Mandya
Published on

ಮಂಡ್ಯ: ಕಾಂಗ್ರೆಸ್ ಕೇವಲ ಮತಬ್ಯಾಂಕಿಗಾಗಿ ಮಾತ್ರ ದಲಿತರನ್ನು ಓಲೈಸುತ್ತದೆ. ಆದರೆ ವಿವರಿಸಲಾಗದಷ್ಟು ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿ ಎಸ್ಪಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಪರಮಾನಂದ ಆರೋಪಿಸಿದರು.

ದಲಿತರನ್ನು ತುಳಿದು ಅವರ ಬೆನ್ನಿಗೆ ಚೂರಿ ಹಾಕಿ ಅವರನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿರುವ ಕಾಂಗ್ರೆಸ್‌ಗೆ ನೂರಾರು ವರ್ಷದ ಇತಿಹಾಸ ಇದೆ. ಸ್ವತಃ ನೆಹರೂರವರೇ ಮೀಸಲಾತಿಯನ್ನು ವಿರೋಧಿಸಿ ಅಂದಿನ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಅಂಬೇಡ್ಕರ್ ಬಗ್ಗೆ ಮಾತನಾಡುವ ಕಾಂಗ್ರೆಸ್ ಎರಡು ಬಾರಿ ಅವರನ್ನು ಸೋಲಿಸಿದೆ. ಜತೆಗೆ ಅವರನ್ನು ಸೋಲಿಸಿದ ವ್ಯಕ್ತಿಗೆ ಪದ್ಮಪ್ರಶಸ್ತಿ ನೀಡಿರುವುದು ಕಾಂಗ್ರೆಸ್‌ನ ದಲಿತ ವಿರೋಧಿಯಲ್ಲವೇ ಎಂದು ಪ್ರಶ್ನಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಮಮತಾ, ಕೇಜ್ರಿವಾಲ್ ಪ್ರಸ್ತಾಪಿಸಿದ ಮೇಲೂ ಸಿದ್ದರಾಮಯ್ಯ, ರಾಹುಲ್‌ಗಾಂಧಿಯನ್ನು ಪ್ರಧಾನಿ ಮಾಡೋಣ ಎನ್ನುತ್ತಿದ್ದಾರೆ. ಇದಕ್ಕಿಂತಲೂ ಬೇರೆ ಉದಾಹರಣೆ ಬೇಕೆ ಎಂದು ಟೀಕಿಸಿದರು.

ಎಸ್‌ಸಿಪಿ/ಟಿಎಸ್‌ಪಿ ಫಂಡ್‌ನ ೨೫ ಸಾವಿರ ಕೋಟಿ ರೂಗೂ ಹೆಚ್ಚಿನ ಹಣವನ್ನು ದುರ್ಬಳಕೆ ಮಾಡಿ ಮುಸಲ್ಮಾನರಿಗೆ ೧೦ ಸಾವಿರ ಕೋಟಿ ರೂ ಘೋಷಣೆ ಮಾಡಿರುವ ಸಿದ್ದರಾಮಯ್ಯ ಅವರು, ಇದೇ ದಲಿತ ವಿರೋಧಿ ಕಾಂಗ್ರೆಸ್ ನೀತಿಯನ್ನು ಮುಂದುವರಿಸಿದ್ದಾರೆ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ೫ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಪಂಚತೀರ್ಥ ಯೋಜನೆ ಪ್ರಾರಂಭಿಸಿತು. ದೆಹಲಿಯಲ್ಲಿ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನೂ ಮೋದಿ ಸರ್ಕಾರ ನಿರ್ಮಿಸಿದೆ. ಇಲ್ಲಿ ಪ್ರತಿಮೆಗಳಲ್ಲಿ ಒಂದನ್ನು ಸ್ವಲ್ಪ ವಿಭಿನ್ನವಾದ ಭಂಗಿಯಲ್ಲಿ  ಸಂವಿಧಾನದೊಂದಿಗೆ ಕುರ್ಚಿಯಲ್ಲಿ ಆರಾಮವಾಗಿ ಕುಳಿತಿರುವುದನ್ನು ತೋರಿಸುತ್ತದೆ ಎಂದು ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿದ್ದರು. ಮೋರ್ಚಾ ಜಿಲ್ಲಾಧ್ಯಕ್ಷ ಟಿ.ಜಿ. ಶಂಕರ್, ಮುಖಂಡರಾದ ನಿತ್ಯಾನಂದ, ಧರಣೇಂದ್ರ, ಹರೀಶ್, ಅನಿಲ್, ಸಿ.ಟಿ. ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net