ಬಜೆಟ್ ಬಗ್ಗೆ ವಿಪಕ್ಷದವರಿಂದ ಟೀಕೆ ಸ್ವಾಭಾವಿಕ, ಸತಿಶ್ ಜಾರಕಿಹೊಳಿ

Screenshot_2023-07-08-19-56-44-72.jpg
Published on

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಬಗ್ಗೆ ವಿಕ್ಷಪದವರಿಂದ ಟೀಕೆ ಸ್ವಾಭಾವಿಕ. ಆದರೆ, ಬಜೆಟ್ ಬಗ್ಗೆ ಜನ ಸಾಮಾನ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
 ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಮಾಡುವುದಕ್ಕಾಗಿ ವಿಪಕ್ಷದವರು ವಿರೋಧ ಮಾಡುತ್ತಾರೆ. ಸರ್ಕಾರದ ಗ್ಯಾರಂಟಿ ಯೋಜನೆಗೆ ಅನುದಾನ ಕೊಟ್ಟು, ಹೊಸ ಯೋಜನೆ ಘೋಷಣೆ ಮಾಡಲಾಗಿದೆ. ವಿಪಕ್ಷದವರ ಟೀಕೆಗೆ ಮಹತ್ವ ಕೊಡಬೇಕಿಲ್ಲ. ಈ ಬಜೆಟ್ ಸರ್ಕಾರಕ್ಕೆ, ಪಕ್ಷಕ್ಕೆ ಅನುಕೂಲ ಆಗಲಿದೆ. ಬಜೆಟ್ ಪರಿಣಾಮ ಲೋಕಸಭಾ ಚುನಾವಣೆವರೆಗೂ ಕಾದು ನೋಡೋಣ. ಅವರದ್ದಾಗಲಿ, ನಮ್ಮದಾಗಲಿ ಬಜೆಟ್ ಅನ್ನು ಅಧಿಕಾರಿಗಳು ಮಾಡುತ್ತಾರೆ ಎಂದರು.
 ಅಬಕಾರಿ ಸುಂಕ ಹೆಚ್ಚಳ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ಮಾಡದ ಏಕೈಕ ಇಲಾಖೆ ಎಂದರೆ ಅದು ಅಬಕಾರಿ. ಇದು ಒಂಥರ ವಿಚಿತ್ರ ಇಲಾಖೆ. ಶೇ.20ರಷ್ಟು ಮಾತ್ರ ನಾವು ತೆರಿಗೆ ಹೆಚ್ಚಿಸಿದ್ದೇವೆ. ಗೋವಾ ಬಿಟ್ಟು ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿಯೇ ಮದ್ಯದ ದರ ಕಡಿಮೆಯಿದೆ ಎಂದರು.
 ಲೋಕಸಭೆ ಚುನಾವಣೆಗೆ ಇನ್ನು ಕೇವಲ 8 ತಿಂಗಳು ಬಾಕಿಯಿದೆ. ಹೀಗಾಗಿ ತಯಾರಿ ಮಾಡಿಕೊಳ್ಳುತ್ತೇವೆ. ಆದರೆ ಬಜೆಟ್ ಅಧಿವೇಶನ ಮುಗಿದ ಬಳಿಕ ಅದಕ್ಕೆ ಹೆಚ್ಚಿನ ಗಮನ ಕೊಡುತ್ತೇವೆ. ಲೋಕಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆಗೆ ಮೊದಲು ಶಾಸಕರಲ್ಲಿ ಒಮ್ಮತದ ಅಭಿಪ್ರಾಯ ಮೂಡಬೇಕು. ನಾವು ಹೇಳಿದ್ದನ್ನು ಪಕ್ಷ ಅಂತಿಮವಾಗಿ ಪರಿಗಣಿಸುತ್ತದೆ. ಆದರೆ, ಶಾಸಕರ ಜತೆಗೆ ಚರ್ಚಿಸಿದ ನಂತರವೇ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದರು. ಟಿಕೆಟ್ ಪಟ್ಟಿಯಲ್ಲಿ ತಮ್ಮ ಪುತ್ರಿ ಹೆಸರು ಇರುತ್ತದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು ಶಾಸಕರು, ಕಾರ್ಯಕರ್ತರ ನಿರ್ಧಾರದಂತೆ ಮುಂದಿನ ಹೆಜ್ಜೆ ಇಡುತ್ತೇವೆ ಎಂದರು.
 ಮಾಜಿ ಸಿಎಂ ಕುಮಾರಸ್ವಾಮಿ ಪೆನ್‌ಡ್ರೈವ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹೊಸ ಸರ್ಕಾರ ಬಂದಾಗ ವರ್ಗಾವಣೆ ಸ್ವಾಭಾವಿಕ. ಕುಮಾರಸ್ವಾಮಿ ಅವರ ಪೆನ್‌ಡ್ರೈವ್‌ನಲ್ಲಿ ಏನಿದೆ ಎಂಬುದು ಹೊರಗೆ ಬಂದರೆ ಮಾತ್ರ ಗೊತ್ತಾಗುತ್ತೆ. ಅದನ್ನು ಪ್ಲೇ ಮಾಡುವುದು, ಸಾಬೀತು ಮಾಡುವುದು ಅವರ ವಿವೇಚನೆಗೆ ಬಿಟ್ಟಿದ್ದು. ಅದಕ್ಕೆ ಅವರು ಸ್ವತಂತ್ರರು. ಇನ್ನು ಅವರು ಏನೂ ಹೇಳದೇ ಕಲ್ಪನೆ ಮಾಡಿಕೊಂಡು ಹೇಳಲು ಬರುವುದಿಲ್ಲ ಎಂದರು.
 ಪ್ರಾದೇಶಿಕ ಆಯುಕ್ತರು, ನಗರ ಪೊಲೀಸ್ ಆಯುಕ್ತರಂತಹ ಹುದ್ದೆಗಳಿಗೆ ಬೆಂಗಳೂರು ಬಿಟ್ಟು ಬೆಳಗಾವಿಗೆ ಬರಲು ಅಧಿಕಾರಿಗಳು ಹಿಂದೇಟು ಹಾಕುತ್ತಿಲ್ಲ. ನೌಕರಿ ಮಾಡಲು ರಾಜ್ಯದ ಎಲ್ಲಿಗೆ ಆದರೂ ಅವರು ಹೋಗಲೇಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net