ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸಿರುವುದು ಸತ್ಯ: ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಆಕ್ರೋಶ

Criticism against the state government mandya
Published on

ಮಂಡ್ಯ: ಬೆಂಗಳೂರಿಗೆಂದು ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸಲಾಗಿದೆ. ಈ ಸಂಬಂಧ ದಾಖಲೆ ಇಟ್ಟುಕೊಂಡೇ ಮಾತನಾಡುತ್ತಿದ್ದೇನೆ. ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೋರಾಟಗಾರರ ಮೇಲೆ ಸುಮ್ಮನೆ ಟೀಕೆ ಮಾಡಬಾರದು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಆಕ್ರೋಶ ವ್ಯಕ್ತಪಡಿಸಿದರು.

ಮಾ.8ರಿಂದ 11ರವರೆಗೆ 6000 ಕ್ಯೂಸೆಕ್‌ನಷ್ಟು ನೀರು ಹೋಗಿದೆ. ವಾಸ್ತವ ಅಂಕಿ ಅಂಶ ಇಟ್ಟುಕೊಂಡೇ ಹೇಳುತ್ತಿದ್ದೇನೆ. ಇದನ್ನು ನಾವು ಹೇಳುತ್ತಿಲ್ಲ, ಅಧಿಕಾರಿಗಳೇ ನೀಡಿರುವ ಮಾಹಿತಿ. ಆದರೆ ಪ್ರಚಾರಕ್ಕೆ ಆರೋಪ ಮಾಡುತ್ತಿದ್ದಾರೆಂದು ನಮ್ಮ ವಿರುದ್ಧ ನರೇಂದ್ರಸ್ವಾಮಿ ಸಮಾವೇಶದಲ್ಲಿ ಭಾಷಣ ಮಾಡಿದ್ದಾರೆ. ನಾವು ಹೋರಾಟಗಾರರು, ದಾಖಲೆ ಇಲ್ಲದೇ ಮಾತನಾಡುವುದಿಲ್ಲ. ಸರ್ಕಾರದ ಭಾಗವಾಗಿರುವ ಶಾಸಕರು ಸುಮ್ಮನೆ ಹೇಳಿಕೆ ನೀಡಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಮಿಳುನಾಡಿಗೆ ನೀರು ಹರಿಸದಂತೆ ನಿರಂತರವಾಗಿ ಹೋರಾಟ ಮಾಡಿದ್ದೇವೆ. ನಮ್ಮ ಆಗ್ರಹವನ್ನು ಕನಿಷ್ಟ ಮಟ್ಟದಲ್ಲಿಯೂ ಪರಿಗಣಿಸಲಿಲ್ಲ. ಹೋರಾಟದ ಬಗ್ಗೆಯೂ ಅಸಡ್ಡೆ ತೋರಿದರು. ಇನ್ನು ಇಂತಹ ಪ್ರಮುಖ ವಿಷಯದ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ರಾಜ್ಯ ಸರ್ಕಾರ ಅವಕಾಶ ನೀಡದಿರುವುದು ದುರಂತ. ಈ ಬಗ್ಗೆ ಪ್ರಶ್ನಿಸಿದರೆ ಉತ್ತರವನ್ನೇ ಕೊಡದೇ ಬೇಜವಾಬ್ದಾರಿತನ ತೋರಿಸಲಾಯಿತು. ಈ ನಡುವೆ ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಹಾಗೂ ಎಂಎಲ್‌ಸಿ ಮರಿತಿಬ್ಬೇಗೌಡ ಮಾತ್ರ ಮಾತನಾಡಿದ್ದಾರೆ ಎಂದರು.

ಆದರೆ ಸಧ್ಯದ ಪರಿಸ್ಥಿತಿ ಗಮನಿಸುವುದಾದರೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಜನ, ಜಾನುವಾರಿಗಳಿಗೆ ನೀರು ಹಾಗೂ ಉಳಿದುಕೊಂಡಿರುವ ಅಲ್ಪಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳಲು ಕೂಡಲೇ ನಾಲೆಗೆ ನೀರು ಹರಿಸಲೇಬೇಕು ಎಂಬುದು ನಮ್ಮ ಪ್ರಮುಖ ಆಗ್ರಹ. ಇದಲ್ಲದೆ ಕಾವೇರಿ ನೀರಿನ ವಿಚಾರದಲ್ಲಿ ನ್ಯಾಯ ಮಂಡಳಿ ತೀರ್ಪನ್ನು ಪೂರ್ಣ ತಿರಸ್ಕರಿಸಬೇಕು. ತಮಿಳುನಾಡಿಗೆ ಹರಿದು ಹೋಗುತ್ತಿರುವ ಹೆಚ್ಚುವರಿ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಮೇಕೆದಾಟು ಸೇರಿದಂತೆ ಸಣ್ಣ, ಮಧ್ಯಮ, ದೊಡ್ಡ ನೀರಾವರಿ ಯೋಜನೆ ತುರ್ತಾಗಿ ಆಗಬೇಕು ಎಂದು ಆಗ್ರಹಿಸಿದರು.

ಮಾತ್ರವಲ್ಲದೆ ಕೆಆರ್‌ಎಸ್ ಡ್ಯಾಂನ ಸುರಕ್ಷತೆ ದೃಷ್ಟಿಯಿಂದ ಗಣಿಗಾರಿಕೆ ಸಂಪೂರ್ಣ ನಿಷೇಧಿಸಬೇಕು. ಟ್ರಯಲ್‌ಬ್ಲಾಸ್ಟ್, ಡಿಸ್ನಿಲ್ಯಾಂಡ್ ಯೋಜನೆಗೆ ಅವಕಾಶ ನೀಡಬಾರದು. ತ.ನಾಡಿಗೆ ನಿರಂತರ ನೀರು ಬಿಟ್ಟ ಕಾರಣ 2023-24 ಮತ್ತು 2024-25ನೇ ಸಾಲಿನಲ್ಲಿ ಸುಮಾರು 3600 ಕೋಟಿ ರೂ ಮೌಲ್ಯದ ಬೆಳೆ ನಷ್ಟವಾಗಿದೆ. ಇದರಲ್ಲಿ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದಲ್ಲಿ 1200 ಕೋಟಿ ರೂ ಇದೆ. ಈ ನಷ್ಟವನ್ನು ರಾಜ್ಯ ಸರ್ಕಾರ ತುಂಬಿಕೊಡಬೇಕೆಂದು ಒತ್ತಾಯಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ ಮಾತನಾಡಿ, ಸಮಿತಿಯನ್ನು ಪುನರ್‌ರಚಿಸಿ ಯುವಸಮೂಹವನ್ನು ಸೇರಿಸಿಕೊಳ್ಳಬೇಕಿದೆ. ಅವರಿಂದ ಹೋರಾಟಕ್ಕೆ ಶಕ್ತಿ ಬರುತ್ತದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಸಭೆ ಕರೆಯಲಾಗುವುದು ಎಂದರು.

ವಿವಿಧ ಸಂಘಟನೆಯ ಇಂಡುವಾಳು ಚಂದ್ರಶೇಖರ್, ಕನ್ನಡಸೇನೆ ಮಂಜುನಾಥ್, ನಾರಾಯಣ್, ಮುದ್ದೇಗೌಡ, ಸಾತನೂರು ವೇಣುಗೋಪಾಲ್, ಎಂ.ವಿ.ಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net