ಬರ ಪರಿಹಾರ ವಿತರಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆರೋಪ

BJP complains to Child Commission against Rahul Gandhi mandya
Published on

ಮಂಡ್ಯ: ಬರ ಪರಿಹಾರದ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದರೂ, ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಆರೋಪಿಸಿದ್ದಾರೆ.

ಕಳೆದ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾದ ಬೆಳೆ ನಷ್ಟಕ್ಕಾಗಿ ರೈತರಿಗೆ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗಿದೆ. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ನಿಂದ ಬಿಡುಗಡೆ ಮಾಡಿರುವ 3,454.22 ಕೋಟಿ ರೂಗಳನ್ನು ಅರ್ಹ ರೈತರಿಗೆ ವಿತರಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದ್ದಾರೆ.

ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತವನ್ನು ನೇರವಾಗಿ ವರ್ಗಾಯಿಸಲು ಅದೇಶಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಜನವರಿಯಲ್ಲಿ ಪ್ರತಿ ರೈತರಿಗೆ ಗರಿಷ್ಟ 2 ಸಾವಿರ ರೂವರೆಗೆ ಮಧ್ಯಂತರ ಪರಿಹಾರ ಪಾವತಿಸಿದೆ. ಈಗ ಆ ಮೊತ್ತ ಕಡಿತ ಮಾಡಿಕೊಂಡು ಎಸ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ನಿಗದಿಯಾದ ಬಾಕಿ ಮೊತ್ತ ಜಮಾ ಮಾಡಲು ಸೂಚಿಸಿರುವ ಸರ್ಕಾರದ ರೈತ ವಿರೋಧಿ ನಡೆ ಸರಿಯಲ್ಲ ಎಂದಿದ್ದಾರೆ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರದಿಂದ 6,800 ರೂ ಜತೆಗೆ ರಾಜ್ಯ ಸರ್ಕಾರ 6,800 ರೂ ಸೇರಿಸಿ 13,600 ರೂಗಳನ್ನು ನೀಡಿತ್ತು. ಅದೇ ಮಾದರಿಯಲ್ಲಿ ಈಗಲೂ ರೈತರಿಗೆ ವಿತರಣೆ ಮಾಡಬೇಕು. ಇದಲ್ಲದೆ ಕಳೆದ ಹಲವಾರು ತಿಂಗಳಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಇದನ್ನೇ ನಂಬಿಕೊಂಡು ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಈಗಾಗಲೇ ಪಶು ಆಹಾರ, ಮೇವು, ಸಾಕಾಣಿಕೆ ವೆಚ್ಚ ಎಲ್ಲವೂ ದುಬಾರಿಯಾಗಿರುವ ಇಂತಹ ಸಂದರ್ಭದಲ್ಲಿ ಹಾಲು ಉತ್ಪಾದಕರ ನೆರವಿಗೆ ಬರಬೇಕಾದ ಸರ್ಕಾರ ಕನಿಷ್ಠ ಪ್ರೋತ್ಸಾಹ ಧನವನ್ನೂ ನೀಡದೆ ರೈತರ ಹೊಟ್ಟೆ ಮೇಲೆ ಬರೆ ಎಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net