

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ್‌ಕುಮಾರ್ ಹೆಗಡೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್ ಹೇಳಿದರು.
ಸಿಎಂ ವಿರುದ್ಧ ಅಸಭ್ಯ ಪದಗಳನ್ನು ಬಳಕೆ ಮಾಡಿದ್ದಾರೆ. ಇದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಸಂಸ್ಕೃತಿ, ನಡವಳಿಕೆಯನ್ನು ತೋರಿಸುತ್ತದೆ. ಸಂಸದರ ಹೇಳಿಕೆಯನ್ನು ಅವರ ವೈಯಕ್ತಿಕವೆಂದು ಬಿಜೆಪಿ ಹೇಳುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಸಿದ್ದರಾಮಯ್ಯ ಅಹಿಂದ ಮನಸ್ಥಿತಿಯನ್ನು ಉಳ್ಳವರೆಂದು ವಿರೋಧಿಸುತ್ತಿರುವುದಾಗಿ ಅನಂತ್‌ಕುಮಾರ್ ಹೆಗಡೆ ಹೇಳಿಕೆ ನೀಡಿದ್ದಾರೆ. ಇದು ಅಹಿಂದ ವರ್ಗದವರನ್ನು ಅವಮಾನಿಸಿದ್ದು, ಕೂಡಲೇ ಸಿಎಂ ಸಿದ್ದರಾಮಯ್ಯ ಅವರ ಕ್ಷಮೆ ಕೇಳಬೇಕಿತ್ತು. ಆದರೆ ಅದನ್ನು ಬಿಟ್ಟು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ಇದರ ಬಗ್ಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಉಪಾಧ್ಯಕ್ಷ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಎಂ.ಜೆ.ಶಶಿಧರ, ಖಜಾಂಚಿ ಎಸ್.ಎನ್.ರಾಜು, ಆಂತರಿಕ ಲೆಕ್ಕ ಪರಿಶೋಧಕ ಎಂ.ಮಹೇಶ್ ಇದ್ದರು.