

ಮಂಡ್ಯ: ಯಾವುದೇ ಕಾರಣವಿಲ್ಲದ್ದರೂ ರಸ್ತೆ ಕಾಮಗಾರಿ ಮಾಡಲು ಶಾಸಕ ರವಿಕುಮಾರ್ ಗಣಿಗ ಅವಕಾಶ ನೀಡುತ್ತಿಲ್ಲ. ಇದಲ್ಲದೆ ಮತ್ತೊಂದು ಪ್ರಕರಣದಲ್ಲಿ ಗುತ್ತಿಗೆದಾರರಿಗೆ ಒತ್ತಡ ಹಾಗೂ ಬೆದರಿಕೆ ಹಾಕಿ ಸಿಂಗಲ್ ಟೆಂಡರ್ ಕಳುಹಿಸಿದ್ದಾರೆ ಎಂದು ಮನ್‌ಮುಲ್ ಮಾಜಿ ಅಧ್ಯಕ್ಷ, ಮಂಡ್ಯ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಗಂಭೀರ ಆರೋಪಿಸಿದರು.
ಕಳೆದ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳನ್ನು ತಡೆಹಿಡಿರುವ ಶಾಸಕರು, ಸುಖಾ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ಮೂರುವರೆ ಕೋಟಿ ರೂ ವೆಚ್ಚದಲ್ಲಿ ಹೊಸಗಾವಿಯ ಮಹದೇಶ್ವರ ದೇವಾಲಯದಿಂದ ಮಾಚಗೌಡನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿ ಟೆಂಡರ್ ಅನ್ನು ತಮ್ಮ ಶಂಭು ಕನ್ಸ್‌ಟ್ರಕ್ಷನ್ ಗುತ್ತಿಗೆ ಪಡೆದಿದೆ. ಮಾಜಿ ಶಾಸಕ ಎಂ.ಶ್ರೀನಿವಾಸ್ ಕಾಮಗಾರಿಗೆ ಪೂಜೆ ಮಾಡಿದ್ದರು. ನಂತರದ ದಿನದಲ್ಲಿ ನೀತಿ ಸಂಹಿತೆ ಜಾರಿಯಾದ ಕಾರಣ ಕೆಲಸ ಮಾಡಲಾಗಲಿಲ್ಲ. ಈಗ ಕೆಲಸ ಮಾಡಲು ಮುಂದಾಗಿದ್ದರೂ ಸಹ ಶಾಸಕ ರವಿಕುಮಾರ್ ಅಧಿಕಾರಿಗಳ ಮೂಲಕ ತಡೆಯೊಡ್ಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಾಮಗಾರಿ ಪ್ರಾರಂಭಿಸುವ ಸಂಬಂಧ ಅಧಿಕಾರಿಗಳನ್ನು ಕೇಳಿದರೆ ಶಾಸಕರ ಬಳಿ ಮಾತನಾಡಿ ಎಂದು ಸಬೂಬು ಹೇಳುತ್ತಿದ್ದಾರೆ. ನಾವು ಯಾವ ಕಾರಣಕ್ಕೆ ಅವರೊಂದಿಗೆ ಮಾತನಾಡಬೇಕೆಂಬುದು ಅರ್ಥವಾಗುತ್ತಿಲ್ಲ. ನಿಯಮದಂತೆ ಟೆಂಡರ್ ಪಡೆದಿದ್ದರೂ ಕೆಲಸ ಮಾಡಲು ಬಿಡದಿರುವ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲಾಗುವುದು. ಇದಲ್ಲದೆ ತುಂಬಕೆರೆ, ಕಚ್ಚಿಗೆರೆ ಗ್ರಾಮದ ರಸ್ತೆ ಕಾಮಗಾರಿಯನ್ನೂ ನಿಲ್ಲಿಸಲಾಗಿದೆ. ಮಾತ್ರವಲ್ಲದೆ ಈ ಕಾಮಗಾರಿಯನ್ನು ಬೇರೆಡೆ ವರ್ಗಾಯಿಸಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಆ ಭಾಗದ ಗ್ರಾಮಸ್ಥರಿಗೂ ಈ ವಿಚಾರ ತಿಳಿಸಿದ್ದೇನೆ. ಈ ಟೆಂಡರ್ ಪಡೆದು ಸುಮಾರು ಒಂದು ವರ್ಷವಾಗಿದೆ. ನಾವು ಈಗಲೂ ರಸ್ತೆ ಮಾಡಲು ಸಿದ್ಧರಿದ್ದೇವೆ. ಅದಕ್ಕೆ ಶಾಸಕರು, ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಹೇಳಿದರು.
ಇನ್ನು ಚಿಕ್ಕಮಂಡ್ಯ ಕೆರೆಯಂಗಳದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು 5 ಕೋಟಿ ರೂಗೆ ಟೆಂಡರ್ ಕರೆಯಲಾಗಿತ್ತು. ಇದಕ್ಕೆ ನಾಲ್ವರು ಗುತ್ತಿಗೆದಾರರು ಅರ್ಜಿ ಸಲ್ಲಿಸಿದ್ದರು. ಆದರೆ ಶಾಸಕ ರವಿಕುಮಾರ್ ಗುತ್ತಿಗೆದಾರರಿಗೆ ಒತ್ತಡ ತಂದು, ಬೆದರಿಕೆಯೊಡ್ಡಿ ಟೆಂಡರ್ ವಾಪಸ್ ತೆಗೆಸಿ, ತಮ್ಮ ಕಡೆಯವರಿಗೆ ಸಿಂಗಲ್ ಟೆಂಡರ್ ಕಳುಹಿಸಿದ್ದಾರೆ. ಕೆಲಸ ಮಾಡಲೆಂದೇ ಅರ್ಜಿ ಸಲ್ಲಿಸಿದ ಗುತ್ತಿಗೆದಾರರು ಈಗ ಏಕೆ ವಾಪಸ್ ಪಡೆಯುತ್ತಾರೆನ್ನುವುದು ಪ್ರಶ್ನೆ. ಇದಲ್ಲದೆ ಆ ಟೆಂಡರ್‌ಗೆ ಸಂಬಂಧಿಸಿದಂತೆ ನಾಲ್ವರು ಎಷ್ಟು ಮೊತ್ತಕ್ಕೆ ಬಿಡ್ ಮಾಡಿದ್ದಾರೆನ್ನುವ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ರವಿಕುಮಾರ್ ಗಣಿಗ ಈ ಎಲ್ಲ ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಆದರೆ ಸಾರ್ವಜನಿಕವಾಗಿ ಜೆಡಿಎಸ್ ಗುತ್ತಿಗೆದಾರರು ತಮಗೆ ಕೆಟ್ಟ ಹೆಸರು ಬರುವಂತಾಗಲೆಂಬ ಕಾರಣಕ್ಕೆ ಕಾಮಗಾರಿ ನಿಲ್ಲಿಸಿದ್ದಾರೆಂದು ಆರೋಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಶಾಸಕರ ಹಸ್ತಕ್ಷೇಪವಿಲ್ಲದಿದ್ದಲ್ಲಿ ನಾವು ಒಪ್ಪಿಕೊಂಡಿರುವ ಕೆಲಸವನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸುತ್ತೇವೆ. ಆದರೆ ಶಾಸಕರೇ ಅದಕ್ಕೆ ಅವಕಾಶ ನೀಡುತ್ತಿಲ್ಲ. ಇವರ ರಾಜಕಾರಣದಿಂದಾಗಿ ಜನ ಹೈರಾಣಾಗುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ನೀರು ಹರಿಸದಿದ್ದರೆ ಹೋರಾಟ: ಜಿಲ್ಲೆಯನ್ನು ಕಾಡುತ್ತಿರುವ ಬರ ಜನ-ಜಾನುವಾರುಗಳ ಕುಡಿಯುವ ನೀರಿಗೂ ಸಂಚಕಾರ ತಂದೊಡ್ಡಿದೆ. ಇಂತಹ ಸಂದರ್ಭದಲ್ಲಿ ಕೆಆರ್‌ಎಸ್ ಡ್ಯಾಂನಿಂದ ನಾಲೆಗಳಲ್ಲಿ ನೀರು ಹರಿಸದೆ ಸರ್ಕಾರ ನಿರ್ಲಕ್ಷೃ ವಹಿಸಿದೆ. ತಕ್ಷಣ ನಾಲೆಗಳಲ್ಲಿ ನೀರು ಹರಿಸಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಬಿ.ಆರ್.ರಾಮಚಂದ್ರು ಎಚ್ಚರಿಕೆ ನೀಡಿದರು.
ಬರದ ತೀವ್ರತೆಯಿಂದಾಗಿ ಬಿಸಿಲ ಝಳ ಹೆಚ್ಚಾಗಿದೆ. ಈಗಾಗಲೇ ಕೆರೆ ಕಟ್ಟೆಗಳು ಬರಿದಾಗಿವೆ. ಬೋರ್‌ವೆಲ್‌ನಲ್ಲೂ ನೀರು ಸಿಗುತ್ತಿಲ್ಲ. ರೈತರು ಮೇವು ಉಳಿಸಿಕೊಳ್ಳಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಜಾನುವಾರುಗಳಿಗೆ ಸರಿಯಾದ ಹುಲ್ಲಿನ ವ್ಯವಸ್ಥೆ ಇಲ್ಲ. ತಕ್ಷಣ ನಾಲೆಗಳಲ್ಲಿ ನೀರು ಹರಿಸುವ ಮೂಲಕ ಜಾನುವಾರುಗಳನ್ನು ರಕ್ಷಣೆ ಮಾಡಬೇಕು. ಡ್ಯಾಂನಲ್ಲಿ 78 ಅಡಿ ನೀರು ಸಂಗ್ರಹವಿದ್ದ ಸಂದರ್ಭದಲ್ಲೂ ಬೇಸಿಗೆ ವೇಳೆ ನಾಲೆಗಳಲ್ಲಿ ನೀರು ಹರಿಸಿರುವ ಉದಾಹರಣೆ ಇದೆ. ಆದ್ದರಿಂದ ಒಂದು ವಾರದೊಳಗೆ ನಾಲೆಗಳಲ್ಲಿ ತಕ್ಷಣ ನೀರು ಹರಿಸಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ನಗರಸಭಾ ಸದಸ್ಯ ನಾಗೇಶ್, ಮಂಡ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬೂದನೂರು ಸ್ವಾಮಿ, ನವೀನ್, ಸಾತನೂರು ಜಯರಾಂ ಇತರರಿದ್ದರು.