ಜೆಡಿಎಸ್ ಜಿಲ್ಲಾಧ್ಯಕ್ಷರನ್ನು ಬದಲಿಸಿ, ಪಕ್ಷವನ್ನು ಉಳಿಸಿ: ದಳಪತಿಗಳಿಗೆ ನಗರಸಭೆ ಮಾಜಿ ಅಧ್ಯಕ್ಷ ಒತ್ತಾಯ

Criticism against JDS district president mandya
Published on

ಮಂಡ್ಯ: ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್ ಅವರನ್ನು ತಕ್ಷಣ ಹುದ್ದೆಯಿಂದ ವಿಮುಕ್ತಿಗೊಳಿಸಿ ಹೊಸಬರನ್ನು ನೇಮಿಸುವಂತೆ ನಗರಸಭೆ ಮಾಜಿ ಅಧ್ಯಕ್ಷ ಎಂ.ಜೆ. ಚಿಕ್ಕಣ್ಣ ಒತ್ತಾಯಿಸಿದರು.

ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗಾಗಿ ಜಿಲ್ಲಾದ್ಯಂತ ಜೆಡಿಎಸ್ ಕಾರ್ಯಕರ್ತರು ಮಿಡಿಯುತ್ತಾರೆ. ನಿಮ್ಮ ಮೇಲಿನ ಅಭಿಮಾನಕ್ಕಾಗಿ ಕಾರ್ಯಕರ್ತರು ಬರುತ್ತಾರೆ. ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಆದರೆ ಸೌಜನ್ಯಕ್ಕಾದರೂ ಜಿಲ್ಲಾಧ್ಯಕ್ಷ ಎನಿಸಿಕೊಂಡಿರುವ ವ್ಯಕ್ತಿ ಕಾಯರ್ಕರ್ತರ ಸಮಸ್ಯೆಯನ್ನು ಕೇಳುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಹೆಸರೇಳಿಕೊಂಡು ಮನೆ ಕಟ್ಟಿಕೊಂಡ, ಜಮೀನು ಖರೀದಿ ಮಾಡಿಕೊಂಡಿದ್ದಾರೆ. ಮಗಳಿಗೆ ಕೆಲಸ ಕೊಡಿಸಿದ್ದಾರೆ. ಆತ ತನ್ನ ವೈಯಕ್ತಿಕವಾಗಿ ಎಲ್ಲವನ್ನೂ ಮಾಡಿಕೊಂಡಿದ್ದಾರೆ. ಕಾರ್ಯಕರ್ತರನ್ನು ನಿಮ್ಮ ಬಳಿಗೆ ಹೋಗಲೂ ಬಿಡುವುದಿಲ್ಲ. ಕಾರ್ಯಕರ್ತರು ಪೊಲೀಸ್ ಠಾಣೆ ಅಥವಾ ಆಸ್ಪತ್ರೆಗಳಲ್ಲಿ ಕೆಲಸವಾಗಬೇಕಿದ್ದರೂ ಕನಿಷ್ಟ ಸೌಜನ್ಯಕ್ಕೂ ಏನೆಂದು ಕಾರ್ಯಕರ್ತರನ್ನು ಕೇಳುವುದಿಲ್ಲ. ಇಂತಹ ಜಿಲ್ಲಾಧ್ಯಕ್ಷ ನಮಗೆ ಬೇಕೇ ಎಂದು ಪ್ರಶ್ನಿಸಿದ್ದಾರೆ.

ಪ್ರತಿ ಚುನಾವಣೆಯಲ್ಲೂ ಅಭ್ಯರ್ಥಿಗಳಿಂದ ಎಲ್ಲ ಸಹಕಾರವನ್ನೂ ಪಡೆಯುವ ಈತನನ್ನು ಕಂಡರೆ ನಿಷ್ಠಾವಂತ ಕಾರ್ಯಕರ್ತರಿಗೆ ಆಗುವುದಿಲ್ಲ. ಎಲ್ಲರೂ ನಿಮ್ಮ ಮುಖವನ್ನು ನೋಡಿಕೊಂಡು ಸುಮ್ಮನಿದ್ದಾರೆ. ಕೆಲವರು ನಿಮ್ಮ ಸಮ್ಮುಖದಲ್ಲೇ ಗಲಾಟೆ ಮಾಡಲೆಂದೇ ಬರುತ್ತಾರೆ. ಆದರೆ ನಿಮ್ಮ ಮುಖ ಕಂಡು ಸುಮ್ಮನಾಗುವಂತಹ ಸ್ಥಿತಿ ಇದೆ. ದಯಮಾಡಿ ತಕ್ಷಣ ಯಾರಿಗೂ ಬೇಡದ ಜಿಲ್ಲಾಧ್ಯಕ್ಷ ಡಿ. ರಮೇಶ್ ಅವರನ್ನು ಬದಲಿಸಿ, ಪಕ್ಷವನ್ನು ಉಳಿಸುವಂತೆ ಒತ್ತಾಯಿಸಿದ್ದಾರೆ.

ಮುಖಂಡ ಗೋಪಾಲಪುರ ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net