ಅಧಿಕಾರದಲ್ಲಿರುವವರ ಓಲೈಸಿಕೊಂಡೇ ಮರಿತಿಬ್ಬೇಗೌಡ ರಾಜಕಾರಣ: ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಮಾಜಿ ಎಂಎಲ್ಸಿ

Criticism against former MLC Marithibbe Gowda mandya
Published on

ಮಂಡ್ಯ: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಮರಿತಿಬ್ಬೇಗೌಡರು ಆಸೆ, ಆಮಿಷಗಳನ್ನು ಒಡ್ಡಿ ಹಾಗೂ ಜಾತಿ ಹೆಸರನ್ನು ಮುನ್ನೆಲೆಗೆ ತಂದು ಗೆದ್ದು ಶಿಕ್ಷಕರನ್ನು ವಂಚಿಸಿದ್ದಾರೆ ಎಂದು ಮಾಜಿ ಎಂಎಲ್‌ಸಿ ಕೆ.ಸಿ.ಪುಟ್ಟಸಿದ್ದಶೆಟ್ಟಿ ಟೀಕಿಸಿದರು.

ಜೆಡಿಎಸ್‌ನಿಂದ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಅವರು ಈಗ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಅಂದರೆ ಯಾರು ಅಧಿಕಾರದಲ್ಲಿರುತ್ತಾರೋ ಅವರನ್ನು ಓಲೈಸಿ ರಾಜಕಾರಣ ಮಾಡುವುದು ಮರಿತಿಬ್ಬೇಗೌಡರಿಗೆ ನೀರು ಕುಡಿದಷ್ಟೇ ಸುಲಭ. ಆದರೆ, ಸ್ವಾಭಿಮಾನಿ ಶಿಕ್ಷಕರಿಗೆ ಇದೆಲ್ಲ ತಿಳಿಯದ್ದೇನಲ್ಲ. ಆದ್ದರಿಂದ ಜಾತಿ, ಮತ ಪರಿಗಣಿಸದೆ ಈ ಕ್ಷೇತ್ರದಲ್ಲಿ ಯಾರು ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ಶಿಕ್ಷಕರು ತುಲನೆ ಮಾಡಿ ಪಕ್ಷೇತರವಾಗಿ ಕಣಕ್ಕಿಳಿದಿರುವ ನನ್ನನ್ನು ಬೆಂಬಲಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಶಿಕ್ಷಕರ ಕ್ಷೇತ್ರದಲ್ಲಿನ ಹಲವು ಬೇಡಿಕೆಗಳ ಕುರಿತು ಸಂಘಟನಾತ್ಮಕ ಹೋರಾಟ ನಡೆಸಿದ ನನ್ನ ಪ್ರಯತ್ನದ ಫಲವಾಗಿ ಹಲವು ಫಲಿತಾಂಶಗಳು ಶಿಕ್ಷಕರಿಗೆ ಅನುಕೂಲವಾಗಿವೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರ ಸುಮಾರು 18,379 ಮತದಾರರನ್ನು ಹೊಂದಿದೆ. ಈ ಕ್ಷೇತ್ರದಲ್ಲಿ 1986ರಿಂದ 2012ರವರೆಗೆ ಕ್ಷಿಪ್ರ ಕ್ರಾಂತಿ ನಡೆಸಿರುವ ನಾನು ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ಥಾಪಿಸಿದೆ. ಮೂವರು ಶಿಕ್ಷಕರನ್ನು ಪಕ್ಷೇತರರನ್ನಾಗಿ ನಿಲ್ಲಿಸಿ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿದ್ದು, 94ರಲ್ಲಿ ನಾನೂ ಕೂಡ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದೆ. ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದ ವೇಳೆ ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ದಕ್ಷಿಣ ಭಾರತದ ಉತ್ತಮ ಶಾಸಕ ಪ್ರಶಸ್ತಿಯನ್ನೂ ಪಡೆದಿದ್ದೇನೆ ಎಂದು ತಿಳಿಸಿದರು.

ಸ್ವಾಭಿಮಾನಿ ಶಿಕ್ಷಕರ ವೇದಿಕೆ ಪದಾಧಿಕಾರಿಗಳಾದ ಕೆಂಪಶೆಟ್ಟಿ, ಶಿವಪ್ಪಶೆಟ್ಟಿ, ಶಿವರಾಜು, ಮೋಹನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net