

ಮಂಡ್ಯ: ಹಲವು ಹೋರಾಟಗಾರರ ತ್ಯಾಗ-ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರೈಸಿದೆ. ಹೀಗಿರುವಾಗ ಗನ್‌ಮ್ಯಾನ್ ರಕ್ಷಣೆಯಲ್ಲಿ ಓಡಾಡುವ ರಾಜಕಾರಣಿಗಳು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಟೀಕಿಸುವುದು ಎಷ್ಟು ಸರಿ ಎಂದು ಶ್ರೀರಂಗಪಟ್ಟಣ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.
ತಾಲೂಕಿನ ಕಿರಗಂದೂರು ಗ್ರಾಮದಲ್ಲಿ ಮಂಗಳವಾರ 60 ಲಕ್ಷ ರೂ ವೆಚ್ಚದ ಸಂಪರ್ಕ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದರು. ರಾಜಕಾರಣಿಗಳಾದವರಿಗೆ ಸ್ವಲ್ಪವಾದರೂ ವಿವೇಕವಿರಬೇಕು. ಹೋರಾಟಗಾರರ ಬಗ್ಗೆ ಅವರು ಸರಿ, ಇವರು ಸರಿಯಿಲ್ಲ ಎಂಬ ಹೇಳಿಕೆ ನೀಡುವುದು ಸಮಂಜಸವಲ್ಲ. ಎರಡು ರಾಷ್ಟ್ರೀಯ ಪಕ್ಷದ ನಾಯಕರು ಯೋಗ್ಯತೆ ಇಲ್ಲದ ರಾಜಕಾರಣಿಗಳು. ಸ್ವಾತಂತ್ರ್ಯ ಹೋರಾಟಕ್ಕಾಗಿ ಶ್ರಮಿಸಿದ ಹಿರಿಯರ ಬಗ್ಗೆ ಟೀಕಿಸುವುದು ನಾಚಿಕೆಗೇಡಿನ ಸಂಗತಿ. ವಿದ್ಯಾವಂತರು ಇಂತಹವರ ಬಗ್ಗೆ ಬಹಳ ಹೀನಾಯವಾಗಿ ನೋಡುತ್ತಾರೆ. ರಾಜಕೀಯದ ಮೌಲ್ಯ ಇಂತಹ ಹೇಳಿಕೆಗಳಿಂದ ಕುಂದುತ್ತಿದೆ. ಸಾರ್ವಜನಿಕರಿಗೆ ಬಳಕೆಯಾಗಬೇಕಿದ್ದ ಪೊಲೀಸರು ರಾಜಕಾರಣಿಗಳಿಗೆ ಮೀಸಲಾಗಿರುವುದು ನೋವಿನ ವಿಚಾರ ಎಂದರು.
ಮೈಶುಗರ್ ಕಾರ್ಖಾನೆಯನ್ನು ಖಾಸಗಿ ಅಥವಾ ಒ ಆ್ಯಂಡ್ ಎಂಗೆ ನೀಡಲು ಒತ್ತಡ ಹೇರಿದ್ದ ಸಂಸದೆ ಸುಮಲತಾ ಅವರು ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸಲು ನನ್ನ ಒತ್ತಡ ಕಾರಣವೆಂಬ ಹೇಳಿಕೆಯೇ ಹಾಸ್ಯಸ್ಪದ. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಹೋರಾಟಕ್ಕೆ ಮಣಿದು ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸಲಾಗುತ್ತದೆ. ಖಾಸಗಿ ವ್ಯಕ್ತಿಗೆ ಗುತ್ತಿಗೆ ಕೊಡಿಸಲು ಆಸಕ್ತಿ ತೋರಿದ ಸಂಸದೆ ಈಗ ಮಾತನಾಡುವುದು ಎಷ್ಟು ಸರಿ ಎಂದರು.
ಗ್ರಾಮದ ಮುಖಂಡರಾದ ತಿಮ್ಮೇಗೌಡ, ಸಂಜೀವಯ್ಯ, ದೊಡ್ಡಲಿಂಗೇಗೌಡ ಇತರರಿದ್ದರು.