ನರೇಗಾ ಹಣ ನೀಡದ ಕೇಂದ್ರ ಸರ್ಕಾರ: ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಆರೋಪ

Criticism against Central Government mandya
Published on

ಮಂಡ್ಯ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡಿದ ಶ್ರಮಿಕರಿಗೆ ಕಳೆದ ಐದು ತಿಂಗಳಿಂದ ಕೇಂದ್ರ ಸರ್ಕಾರ ಕೂಲಿ ಹಣವನ್ನೇ ಬಿಡುಗಡೆ ಮಾಡಿಲ್ಲ ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಆರೋಪಿಸಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಸಿಪಿಐಎಂ ಜಿಲ್ಲಾ ಸಮಿತಿ ಆಯೋಜಿಸಿದ್ದ ‘ಶ್ರಮಜೀವಿಗಳ ಸಮಾವೇಶ’ದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಕಾನೂನು ಬದ್ಧವಾಗಿ ಕೆಲಸ ಮುಗಿದ 15 ದಿನದೊಳಗೆ ಹಣ ನೀಡಬೇಕು. ಕಳೆದ ಅಕ್ಟೋಬರ್ ತಿಂಗಳಿಂದ ಜಿಲ್ಲೆಯ ಕೂಲಿಕಾರರಿಗೆ ಕೂಲಿ ಹಣವನ್ನೇ ನೀಡಿಲ್ಲ. ಬಾಕಿ ಉಳಿಸಿಕೊಂಡಿರುವ ಕೂಲಿ ಹಣವೇ 13 ಕೋಟಿ ರೂಗಳಾಗಿವೆ ಎಂದರು.

ದೆಹಲಿಗೆ ರೈತರು ಬರುವುದನ್ನ ತಡೆಯಲು ಬ್ಯಾರಿಕೇಡ್ ಹಾಕಿ, ಲಾಠಿಚಾರ್ಜ್ ಮಾಡಿ, ಗುಂಡು ಹೊಡೆಯಲಾಗುತ್ತಿದೆ. ಇದರ ನಡುವೆ ರಕ್ಷಣಾ ಉದ್ದೇಶಕ್ಕೆ ಬಳಸುವ ಡ್ರೋಣ್ ಮೂಲಕ ಟಿಯರ್ ಗ್ಯಾಸ್ ಸಿಡಿಸಿ ರೈತರನ್ನು ತಡೆದು ಶತ್ರುಗಳ ರೀತಿ ಕೇಂದ್ರ ಸರ್ಕಾರ ನೋಡುತ್ತಿದೆ. ರೈತರು ಒಂದು ವರ್ಷ ದೆಹಲಿ ಗಡಿಯಲ್ಲಿ ಚಳವಳಿ ಮಾಡಿದಾಗ ಬೆಳೆಗಳಿಗೆ ಕನಿಷ್ಟ ಬೆಂಬಲಬೆಲೆ ನೀಡುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿತ್ತು. ಆದರೆ ಅನುಷ್ಠಾನಕ್ಕೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಎಂ.ಪುಟ್ಟಮಾದು, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಬಸವರಾಜು ಮಾತನಾಡಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಮಂಡ್ಯ ತಾಲೂಕು ಕಾರ್ಯದರ್ಶಿ ಸಿ.ಕುಮಾರಿ, ಮಂಡಳಿ ಸದಸ್ಯರಾದ ಭರತ್‌ರಾಜ್, ದೇವಿ, ಬಿ.ರಾಮಕೃಷ್ಣ, ಮುಖಂಡರಾದ ಗುರುಪ್ರಸಾದ್ ಕೆರಗೋಡು, ರಾಮಕೃಷ್ಣ, ಶೋಭಾ, ಸುಶೀಲಾ, ಬಿ.ಹನುಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net