ವಿಶ್ವವಿದ್ಯಾನಿಲಯ ಸ್ಥಾಪಿಸಿ ಗಮನಹರಿಸದ ಬಿಜೆಪಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕೆ

Criticism against BJP Mandya
Published on

ಮಂಡ್ಯ: ಬಿಜೆಪಿ ಸರ್ಕಾರ ಸುಮ್ಮನೆ ವಿಶ್ವವಿದ್ಯಾನಿಲಯಗಳನ್ನು ತೆರೆದು ಬಿಟ್ಟಿದ್ದಾರೆಯೇ ಹೊರತು ಅವುಗಳ ನಿರ್ವಹಣೆ ಬಗ್ಗೆ ಸ್ವಲ್ಪವು ಗಮನ ಹರಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

ತಾಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸ್ಥಾಪನೆ ಮಾಡಿದ್ದಾರೆನ್ನುವ ಒಂದೇ ಕಾರಣಕ್ಕೆ 9 ವಿಶ್ವವಿದ್ಯಾನಿಲಯವನ್ನು ಬಂದ್ ಮಾಡಿದ್ದಾರೆಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾಗೆ ನೋಡಿದರೆ ಬಿಜೆಪಿಯವರು ಸುಮ್ಮನೆ ವಿವಿಗಳನ್ನ ಸ್ಥಾಪನೆ ಮಾಡಿಬಿಟ್ಟಿದ್ದಾರೆ. ಸ್ಥಾಪನೆಯಾದ ವಿವಿಗಳಿಗೆ ಅವರು ಹಣ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.

ವಿವಿ ಮುಚ್ಚುವ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಉಪ ಸಮಿತಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದೆ ತೀರ್ಮಾನ ಮಾಡುತ್ತೇವೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತಾಡುವುದಕ್ಕೆನೋ ಮಾತನಾಡುತ್ತಾರೆ. ಅಧಿಕಾರದಲ್ಲಿದ್ದಾಗ ಮಾಡಬೇಕಿತ್ತು, ಅಧಿಕಾರದಿಂದ ಇಳಿದ ಮೇಲೆ ಮಾತನಾಡುತ್ತಾರೆ. ನಮಗೂ ವಿವಿಗಳನ್ನ ಮುಚ್ಚುವ ಆಸೆ ಇಲ್ಲ ಎಂದರು.

ಲೋಕಾಯುಕ್ತ ಅಧಿಕಾರಿಗಳು ಪೋಸ್ಟಿಂಗ್ ಸಿಎಂ ಕೈಲಿದೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ತಿರುಗೇಟು ನೀಡಿದ ಸಚಿವ ಸಿಆರ್‌ಎಸ್, ಮುಡಾ ಕೇಸನ್ನು ಸಿಬಿಐಗೆ ಬೇಡ ಎಂದು ಕೋರ್ಟ್ ರಿಜೆಕ್ಟ್ ಮಾಡಿತು. ಇದರ ಅರ್ಥ ಏನು?. ಇದೆಲ್ಲ ಎಲ್ಲರಿಗೂ ಗೊತ್ತಿರುವ ಸತ್ಯ. ಇ.ಡಿ ಬಿಜೆಪಿ ಅಂಡರ್‌ನಲ್ಲಿದೆ. ಇ.ಡಿ ತನಿಖೆ ಮಾಡಿಸಿದರೂ, ಅದರಿಂದ ಹೊರ ಬರಲಿದ್ದೇವೆ. ಬಿಜೆಪಿಯವರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ಕಣ್ಣು. ಸಿದ್ದರಾಮಯ್ಯ ಯಾವ ಭ್ರಷ್ಟಾಚಾರದಲ್ಲಿ ಸಿಲುಕುತ್ತಿಲ್ಲ ಎಂದು ಹುಡುಕುತ್ತಿದ್ದಾರೆ. ಇ.ಡಿ, ಸಿಬಿಐ, ಲೋಕಾಯುಕ್ತದಲ್ಲಿ ತನಿಖೆ ಮಾಡಿದರೂ ಏನು ಸಿಗಲ್ಲ ಎಂದು ಹೇಳಿದರು.

ಯುಗಾದಿಗೆ ಕಂತೆ ಕಂತೆ ಹಣ ಬರಲಿದೆ ಎಂಬ ಶಾಸಕ ಬಸವಂತಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎನ್.ಚಲುವರಾಯಸ್ವಾಮಿ, ಬಸವಂತಪ್ಪ ಆಡು ಭಾಷೆಯಲ್ಲಿ ಕಂತೆ ಕಂತೆ ಹಣ ಬರಲಿದೆ ಎಂದು ಹೇಳಿದ್ದಾರೆ. ಎರಡ್ಮೂರು ತಿಂಗಳು ನಿಂತಿರುವ ಹಣ ಒಟ್ಟಿಗೆ ಬರಲಿದೆ ಎನ್ನುವುದು ಅವರ ಮಾತು. ಇನ್ನು ಜಿಲ್ಲೆಯಲ್ಲಿ ಗಾಂಜಾ ಪ್ರಕರಣ ಹೆಚ್ಚಾದ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಪಿ, ಐಜಿಗೆ ಮಾತನಾಡಿದ್ದೇನೆ. ಇದಕ್ಕೆ ಪೊಲೀಸರು ಕಡಿವಾಣ ಹಾಕಲಿದ್ದಾರೆ. ಗಾಂಜಾ, ಇಸ್ಪೀಟ್‌ಗೆ ಕಡಿವಾಣ ಬೀಳಲಿದೆ. ಕಾನೂನು ಎಷ್ಟೇ ಬಿಗಿಯಾದರೂ ಕೂಡ ಇಂತಹ ಘಟನೆ ನಡಿಯುತ್ತಲಿರುತ್ತವೆ. ಆದ್ದರಿಂದ ಪೊಲೀಸರಿಗೆ ಗಂಭೀರವಾಗಿ ಕ್ರಮ ಕೈಗೊಳ್ಳಲು ತಿಳಿಸಿದ್ದೇವೆ ಎಂದರು.

ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮಾಜಿ ಶಾಸಕ ಎಚ್.ಬಿ.ರಾಮು, ಎಂಡಿಸಿಸಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಪುಟ್ಟಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net