

ಬೆಳಗಾವಿ: ವೈದ್ಯಕೀಯ ಕ್ಷೇತ್ರದಲ್ಲಿ ಗುಣಮಟ್ಟದ ಚಿಕಿತ್ಸೆ, ಹೈಟೆಕ್ ಸೌಲಭ್ಯ, ನುರಿತ ವೈದ್ಯರ ಸೇವೆಯ ಮೂಲಕವೇ ವಿಶಿಷ್ಟ ಮೈಲಿಗಲ್ಲು ಸ್ಥಾಪಿಸಿರುವ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಇದೀಗ ಪ್ರಥಮ ಬಾರಿಗೆ ಪೆನುಂಬ್ರಾ ಡಿವೈಸ್ ಮೂಲಕ ಪಲ್ಮನರಿ ಮೆಕಾನಿಕಲ್ ಥ್ರೊಂಬೋಕ್ಟಮಿ ಚಿಕಿತ್ಸಾ ಪ್ರಕ್ರಿಯೆ ನಡೆಸಿ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದೆ.
ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ 31 ವರ್ಷದ ವ್ಯಕ್ತಿಯ ಕಾಲಿನ ರಕ್ತನಾಳದಲ್ಲಿ ಹೆಪ್ಪುಗಟ್ಟಿದ್ದ (ಡೀಪ್ ವೇನ್ ಥ್ರಂಬೋಸಿಸ್) ರಕ್ತವು ಶ್ವಾಸಕೋಶಕ್ಕೆ (ಮಾಸಿವ್ ಪಲ್ಮನರಿ ಎಂಬಾಲಿಸಮ್) ಸಂಚರಿಸಿದ ಕಾರಣ ಕಡಿಮೆ ರಕ್ತದೊತ್ತಡದೊಂದಿಗೆ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ಆಸ್ಪತ್ರೆಗೆ ಆಗಮಿಸಿದ ಕೂಡಲೇ ತುರ್ತಾಗಿ ಪೆನುಂಬ್ರಾ ಡಿವೈಸ್ ಮೂಲಕ ಪಲ್ಮನರಿ ಮೆಕಾನಿಕಲ್ ಥ್ರಂಬೋಕ್ಟಮಿ ಚಿಕಿತ್ಸಾ ಪ್ರಕ್ರಿಯೆಯನ್ನು ಹೃದ್ರೋಗ ತಜ್ಞವೈದ್ಯ ಡಾ. ಸಮೀರ್ ಅಂಬರ ಹಾಗೂ ಡಾ. ಸಂಜಯ್ ಪೋರವಾಲ್ ಯಶಸ್ವಿಯಾಗಿ ನೆರವೇರಿಸಿದರು. ಅತ್ಯಂತ ಕ್ಲಿಷ್ಟಕರವಾದ ಈ ಚಿಕಿತ್ಸಾ ಪ್ರಕ್ರಿಯೆಗೆ ಹಿರಿಯ ತಜ್ಞವೈದ್ಯ ಡಾ. ಎಸ್.ವಿ. ಪಟ್ಟೇದ, ಡಾ.ವಿಜಯ ಮೆಟಗುಡಮಠ, ಡಾ.ಪ್ರಸಾದ.ಎಂ.ಆರ್. ಹಾಗೂ ಡಾ. ವಿಶ್ವನಾಥ ಹೆಸರೂರ ಕೈ ಜೋಡಿಸಿದ್ದಾರೆ.
ಯಶಸ್ವಿ ಚಿಕಿತ್ಸಾ ಪ್ರಕ್ರಿಯೆ ನಡೆಸಿದ ವೈದ್ಯರ ತಂಡವನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ. ಎಂ .ದಯಾನಂದ ಅಭಿನಂದಿಸಿದ್ದಾರೆ.
ಮನುಷ್ಯ ದೇಹದಲ್ಲಿ ಪಲ್ಮನರಿ ಎಂಬಾಲಿಸಂ ಎಂಬುದು ಗಂಭೀರ ಪರಿಸ್ಥಿತಿಯಾಗಿದ್ದು, ರಕ್ತ ಹೆಪ್ಪುಗಟ್ಟುವಿಕೆಯಿಂದ ಶ್ವಾಸಕೋಶಕ್ಕೆ ರಕ್ತ ಸಂಚಾರದಲ್ಲಿ ತೊಂದರೆಯುಂಟಾಗುತ್ತದೆ. ಅಪಧಮನಿಗಳಲ್ಲಿನ ರಕ್ತಹೆಪ್ಪುಗಟ್ಟುವಿಕೆಯನ್ನು ಶೀಘ್ರವೇ ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡದಿದ್ದರೆ, ಸಾವು ಸಂಭವಿಸುವ ಸಾಧ್ಯತೆ ಅಕವಾಗಿರುತ್ತದೆ. ಕಾಲಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯು ಶ್ವಾಸಕೋಶಕ್ಕೆ ಸಂಚರಿಸುವ ಸಾಧ್ಯತೆ ಸಾಮಾನ್ಯ. ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಗಳಲ್ಲಿ ಯಾವುದಾದರೂ ಶಸಚಿಕಿತ್ಸೆ ನೆರವೇರಿಸಿದಾಗ, ದೀರ್ಘಕಾಲದಿಂದ ಹಾಸಿಗೆಯಲ್ಲಿರುವ ರೋಗಿ, ನಿರಂತರ ಸ್ಟಿರಾಯ್ಡಿ, ತಂಬಾಕು ಸೇವನೆಯು ಡೀಪ್ ವೇನ್ ಥ್ರಂಬೋಸಿಸ್‌ಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ರೋಗಿಗಳು ಕಾಲು ನೋವು ಮತ್ತು ಉಸಿರಾಟದ ತೊಂದರೆಯೊಂದಿಗೆ ಕಾಲಿನಲ್ಲಿ ಬಾವು ಕಂಡು ಬರುತ್ತದೆ. ಅತ್ಯಾಧುನಿಕ ತಂತ್ರಜ್ಞಾನವಾದ ಪೆನುಂಬ್ರಾ ಕೃತಕ ಬುದ್ಧಿಮತ್ತೆ ಚಾಲಿತ ವ್ಯವಸ್ಥೆಯಾಗಿದ್ದು, ಎಂಡೋವಾಸ್ಕುಲರ್ ಕಾರ್ಯವಿಧಾನಗಳಲ್ಲಿ ಹೆಪ್ಪುಗಟ್ಟುವಿಕೆಯನ್ನು ತೆಗೆಯಲು ಸಹಕರಿಸುತ್ತದೆ.