

ಮಡಿಕೇರಿ: ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆ ಬಳಿ ೨೯ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ ನಿರ್ಮಾಣ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಕಾಮಗಾರಿ ಸಂಬಂಧಪಟ್ಟ ಎಂಜಿನಿಯರ್ ರಾಜೇಶ್ ಮಾತನಾಡಿ, ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆಯನ್ನು ೪೫ ಸೆಂಟು ಜಾಗದಲ್ಲಿ ಬೋಧಕ ಆಸ್ಪತ್ರೆ ಹತ್ತಿರ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಸದ್ಯ ಈಗಾಗಲೇ ನಿರ್ಮಾಣ ಆಗುತ್ತಿರುವ ೪೫೦ ಹಾಸಿಗೆ ಆಸ್ಪತ್ರೆಯ ಜನರಲ್ ವಿಭಾಗದಲ್ಲಿ ೧೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆಸ್ಪತ್ರೆ ನವೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಈಗಾಗಲೇ ೧೦೦ ಕೋಟಿ ರೂ. ಬಿಡುಗಡೆಯಾಗಿದ್ದು, ಹೆಚ್ಚುವರಿಯಾಗಿ ಅನುದಾನ ಬೇಕಿದೆ. ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ ೧೫ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಗೆ ಆದ್ಯತೆ ಮೇಲೆ ಎಂಆರ್‌ಐ ಸ್ಕ್ಯಾನ್ ಬೇಕಿದೆ. ಜತೆಗೆ ಮದರ್ ಚೈಲ್ಡ್ ಆಸ್ಪತ್ರೆ ಬೇಕಿದೆ ಎಂದರು.
ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಸತೀಶ್ ಮಾತನಾಡಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುವ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಸತಿ ಗೃಹ ಕಲ್ಪಿಸುವಂತೆ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಸಂಸದರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯಾಧಿಕಾರಿಗಳಿಗೆ ವಸತಿ ಗೃಹ ಕಲ್ಪಿಸುವ ಸಂಬಂಧ ಜಾಗ ಒದಗಿಸಲಾಗುವುದು ಎಂದರು.
ಸಂಬಂಧಪಟ್ಟ ಎಂಜಿನಿಯರ್ ಮಾತನಾಡಿ, ಈಗಾಗಲೇ ಮೂರ್ನಾಡು ರಸ್ತೆಯ ಪ್ರವಾಸಿ ಮಂದಿರ ವೈದ್ಯಕೀಯ ಕಾಲೇಜಿಗೆ ಆಗಿದೆ. ಈ ಜಾಗದಲ್ಲಿ ವಸತಿ ಗೃಹ ನಿರ್ಮಾಣ ಮಾಡಬಹುದಾಗಿದೆ ಎಂದು ತಿಳಿಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪ್ರತಾಪ್ ಸಿಂಹ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ ೭೫೦ ಹಾಸಿಗೆ ಆಸ್ಪತ್ರೆ, ೧೦೦ ಕೋಟಿ ರೂ. ಬಿಡುಗಡೆಯಾಗಿದೆ. ಇನ್ನೂ ೭೦ ಕೋಟಿ ರೂ. ಬೇಕಿದ್ದು, ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಸ್ವಾಮಿ, ಪ್ರಭಾರ ನಿರ್ದೇಶಕರಾದ ನರಸಿಂಹ ರೈ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ, ಎಂಜಿನಿಯರ್‌ಗಳಾದ ಶ್ರೀನಿವಾಸ್ ಗೌಡ, ನರಸಿಂಹ ಮೂರ್ತಿ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ದೀಪಕ್, ಇತರರು ಇದ್ದರು.