ಹೊಸ ಜಿಲ್ಲಾಸ್ಪತ್ರೆಯಲ್ಲಿ ಕ್ರಿಟಿಕಲ್​ ಕೇರ್​ ಸೆಂಟರ್​

udp-9-critical care
Published on

ಉಡುಪಿ: ಅಜ್ಜರಕಾಡಿನಲ್ಲಿ 115 ಕೋಟಿ ರೂ. ವೆಚ್ಚದಲ್ಲಿ 250 ಬೆಡ್ಗಳ ಜಿಲ್ಲಾಸ್ಪತ್ರೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಶೇ. 80ರಷ್ಟು ಪೂರ್ಣಗೊಂಡಿದ್ದು, ವರ್ಷಾಂತ್ಯಕ್ಕೆ ಸೇವೆಗೆ ಸಿದ್ಧವಾಗಲಿದೆ. ಇದೀಗ ಹೆಚ್ಚುವರಿಯಾಗಿ 16 ಕೋಟಿ ರೂ. ಅನುದಾನದಲ್ಲಿ 50 ಬೆಡ್ಗಳ ಕ್ರಿಟಿಕಲ್​ ಕೇರ್​ ಸೆಂಟರ್​ ಪ್ರಾರಂಭಿಸಲಾಗುತ್ತಿದೆ.

ರಾಜ್ಯದಲ್ಲಿ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ 'ಆಧುನಿಕ ಕ್ರಿಟಿಕಲ್​ ಕೇರ್​' ಬ್ಲಾಕ್​ ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಬಜೆಟ್​ನಲ್ಲಿ ಅನುದಾನ ಮೀಸಲಿರಿಸಿದೆ. ಕೇಂದ್ರ ಸರ್ಕಾರ ಕಟ್ಟಡ ಮತ್ತು ಅಗತ್ಯ ಉಪಕರಣಗಳನ್ನು ಒದಗಿಸಲಿದ್ದು, ವೈದ್ಯರು ಮತ್ತು ಸಿಬ್ಬಂದಿ ನೇಮಕ, ಸಂಬಳ ಇತ್ಯಾದಿ ರಾಜ್ಯ ಸರ್ಕಾರದ ಜವಾಬ್ದಾರಿ. ಪ್ರಸ್ತುತ ಹೊಸದಾಗಿ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣವಾಗುತ್ತಿರುವುದರಿಂದ ಪ್ರತ್ಯೇಕ ಕಟ್ಟಡದ ಅವಶ್ಯಕತೆ ಇಲ್ಲ. ಇದೇ ಕಟ್ಟಡದಲ್ಲಿ ನೆಲಅಂತಸ್ತು, 2ನೇ ಮಹಡಿ ಮತ್ತು 5ನೇ ಮಹಡಿಯಲ್ಲಿ ಕ್ರಿಟಿಕಲ್​ ಕೇರ್​ ಯುನಿಟ್​ಗೆ ಜಾಗ ಕಾಯ್ದಿರಿಸಲಾಗುತ್ತಿದೆ. ಈ ಯುನಿಟ್​ ಪ್ರತ್ಯೇಕ ವೈದ್ಯರು, ದಾದಿಯರು, ಅತ್ಯಾಧುನಿಕ ಜೀವರಕ್ಷಕ ಸೌಲಭ್ಯಗಳನ್ನು ಹೊಂದಿರುತ್ತದೆ. ಆ್ಯಂಬುಲೆನ್ಸ್​ಗಳಿಗೆ ಪ್ರತ್ಯೇಕ ಆಗಮನ&ನಿರ್ಗಮನ ಮಾರ್ಗಗಳಿದ್ದು, ಯಾವುದೇ ಅಡಚಣೆಗಳಿಲ್ಲದೆ ರೋಗಿಗಳಿಗೆ ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮತ್ತು ತೀವ್ರ ನಿಗಾ ಸೇವೆಗಳನ್ನು ಒದಗಿಸುವುದು ಯೋಜನೆ ಉದ್ದೇಶ.

ಪ್ರಾಕೃತಿಕ ವಿಕೋಪದಲ್ಲಿ ನೆರವು
ಕೋವಿಡ್​ ಸಾಂಕ್ರಾಮಿಕ ರೋಗವು ಜಿಲ್ಲಾ ಮಟ್ಟದಲ್ಲಿ ನಿರ್ಣಾಯಕ ಆರೈಕೆ ಸೌಲಭ್ಯಗಳ ಅಗತ್ಯತೆಯನ್ನು ಮನಗಾಣಿಸಿದೆ. ಅನೇಕ ಆಸ್ಪತ್ರೆಗಳಲ್ಲಿ ಒಂದು ಭಾಗವನ್ನು ಸಾಂಕ್ರಾಮಿಕ ರೋಗ ಚಿಕಿತ್ಸಾ ಬ್ಲಾಕ್​ಗಳಾಗಿ ಪ್ರತ್ಯೇಕಿಸುವುದು ಅಸಾಧ್ಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕಿಯ ಕಾಲೇಜುಗಳಲ್ಲಿ ಕ್ರಿಟಿಕಲ್​ ಕೇರ್​ ಬ್ಲಾಕ್​ಗಳನ್ನು ನಿರ್ಮಿಸುವ ಮೂಲಕ ಸಾಂಕ್ರಾಮಿಕ ರೋಗಗಳು, ನೆರೆ, ಭೂಕುಸಿತ ಇತ್ಯಾದಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಮಯೋಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.

9 ಮಂದಿ ವೈದ್ಯರ ಸೇವೆ
50 ಬೆಡ್​ಗಳ ಆಧುನಿಕ ಕ್ರಿಟಿಕಲ್​ ಕೇರ್​ ಸೆಂಟರ್​ನಲ್ಲಿ 4 ಮಂದಿ ತಜ್ಞ ವೈದ್ಯರೂ ಸೇರಿದಂತೆ 9 ಮಂದಿ ವೈದ್ಯರು ಸೇವೆ ಸಲ್ಲಿಸಲಿದ್ದಾರೆ. 25 ಮಂದಿ ಶುಶ್ರೂಷಕಿಯರು, 20 ಮಂದಿ ಗ್ರೂಪ್​ ಡಿ ನೌಕರರ ಹುದ್ದೆ ಮಂಜೂರಾತಿಗೆ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಯಾಲಿಸಿಸ್​ಗಾಗಿ 2 ಬೆಡ್​ಗಳನ್ನು ಕಾಯ್ದಿರಿಸಲಾಗಿದ್ದು, ಹೃದಯಾಘಾತ, ಶ್ವಾಸಕೋಶದ ಕಾಯಿಲೆ, ನವಜಾತ ಶಿಶುಗಳ ಅಸ್ವಸ್ಥೆಗಳಿಗೆ ಆರೈಕೆ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net