ಬಳ್ಳಾರಿ : ಸಂಡೂರು ಕ್ಷೇತ್ರದಲ್ಲಿ ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಸುಲಭವಾಗಿ ಗೆದ್ದಿರುವ ಕಾಂಗ್ರೆಸ್‌ಗೆ ಈ ಬಾರಿ ಸ್ವಪಕ್ಷದ ಅಸಮಾಧಾನಿತರ ಹಾಗೂ ಮೈತ್ರಿ ಅಭ್ಯರ್ಥಿ ಘೋಷಣೆಯಿಂದ ಪೆಟ್ಟು ನೀಡಬಹುದೆ ಎಂಬ ಚಿಂತೆ ಕಾಡುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಕೆಆರ್‌ಪಿಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸ್ಪರ್ಧೆಯಿಂದ ಮತಗಳು ವಿಭಜನೆಯಾಗಿ ಅತ್ಯಧಿಕ ಮತಗಳ ಅಂತರದಿಂದ ಕಾಂಗ್ರೆಸ್ ಗೆಲವು ಸಾಧಿಸಿತು. ಆದರೆ, ಈ ಉಪಚುನಾವಣೆ ಕಳೆದ ಬಾರಿಯಂತೆ ಇಲ್ಲ. ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಟಿಕೆಟ್ ಘೋಷಿಸಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 85,223, ಬಿಜೆಪಿ 49,701, ಕೆಆರ್‌ಪಿಪಿ 31,307, ಜೆಡಿಎಸ್ 2,617 ಮತಗಳು ಪಡೆದಿವೆ. ಆದರೆ, ಈ ಬಾರಿ ಮೂರು ಪಕ್ಷದ ಮತಗಳು ಒಂದೇ ಅಭ್ಯರ್ಥಿಗೆ ಚಲಾವಣೆಯಾಗುವುದರಿಂದ ಕಾಂಗ್ರೆಸ್‌ಗೆ ಗೆಲವು ಕಠಿಣವಾಗಲಿದೆ ಎಂಬ ಚರ್ಚೆ ಜೋರಾಗಿದೆ.
ಈ ಕ್ಷೇತ್ರದಲ್ಲಿ ನಿರಂತರವಾಗಿ ಕಾಂಗ್ರೆಸ್ ಗೆಲ್ಲಲು ಶಕ್ತಿಯಾಗಿರುವುದು ಕಾರ್ಯಕರ್ತರು. ಆದರೆ, ಈ ಬಾರಿ ಉಪ ಚುನಾವಣೆಯಲ್ಲಿ ಸಂಸದ ಈ. ತುಕಾರಾಮ್ ಕುಟುಂಬದವರಿಗೆ ಹೊರತುಪಡಿಸಿ ಬೇರೆಯವರಿಗೆ ನೀಡಬೇಕು ಎಂಬುದು ಸ್ಥಳಿಯ ಕಾರ್ಯಕರ್ತರ ಒತ್ತಾಯ. ಅಲ್ಲದೆ, ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಿ ಹೊಸ ಕಾರ್ಯಕರ್ತರಿಗೆ ಮನ್ನಣೆ ಹಾಕಬೇಕು ಎಂಬ ಉದ್ದೇಶದಿಂದ ಸ್ವತಃ ಕಾರ್ಮಿಕ ಸಚಿವ ಸಂತೋಷ ಲಾಡ್, ಸಿಎಂ ಸಿದ್ದರಾಮಯ್ಯ ಬಳಿ ಪ್ರಸ್ತಾಪಿಸಿದ್ದರಿಂದ ಅಭ್ಯರ್ಥಿ ಹೆಸರು ಘೋಷಿಸಲು ತಡವಾಯಿತು. ಆದರೆ, ಪಟ್ಟು ಬಿಡದ ಸಂಸದ ಈ.ತುಕಾರಾಮ್ ಪತ್ನಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾದರು. ಈ ಚುನಾವಣೆಯಲ್ಲಿ ಅಸಮಾಧಾನಿತರು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿಲಿದ್ದಾರೆ ಎಂಬುದು ಮಾತ್ರ ಅನುಮಾನ. ಕಳೆದ ನಾಲ್ಕು ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಾರಿ ಅಂತರದಿಂದ ಗೆಲ್ಲಿಸಿದರು ಕೂಡ ಮರಳಿ ಆ ಕುಟುಂಬದವರಿಗೆ ಮಣೆ ಹಾಕಿರುವುದು ಕಾರ್ಯಕರ್ತರಲ್ಲಿ ಬೇಸರ ತರಿಸಿದೆ.
ಲಾಡ್‌ಗೆ ಮನವೊಲಿಕೆ ಸವಾಲು : ಕಾರ್ಮಿಕ ಸಚಿವ ಸಂತೋಷ ಲಾಡ್ ಕ್ಷೇತ್ರದಲ್ಲಿ ತನ್ನದೆ ಪ್ರಾಬಲ್ಯವಿದೆ. ಕ್ಷೇತ್ರ ಬಿಟ್ಟು ಕಳೆದ ಎರಡು ದಶಕಗಳೇ ಕಳೆದರೂ ಕ್ಷೇತ್ರದ ಹಿಡಿತ ಮಾತ್ರ ಸಡಿಲಗೊಳಿಸಿಲ್ಲ. ಸಂಡೂರಿನಲ್ಲಿ ಕಾರ್ಯಕರ್ತರ ಯಾವುದೇ ಸಭೆ, ವಿವಾಹ, ಸಮಾರಂಭಗಳೇ ಇರಲಿ ಖುದ್ದು ಭೇಟಿ ನೀಡುವುದು ಸಾಮಾನ್ಯ. ಕಳೆದ ನಾಲ್ಕು ಬಾರಿ ತುಕಾರಾಮ್ ಅಭ್ಯರ್ಥಿ ಎಂದು ಘೋಷಿಸಿದ ಕೂಡಲೇ ಸೊಪ್ಪೆ ಹಾಕದೆ ಗೆಲುವಿಗೆ ಶ್ರಮಿಸುತ್ತಿದ್ದ ಕಾರ್ಯಕರ್ತರೆ ಈ ಬಾರಿ ತುಕಾರಾಮ್ ಪತ್ನಿ ಅನ್ನಪೂರ್ಣಗೆ ಟಿಕೆಟ್ ನೀಡಬಾರದೆಂದು ಲಾಡ್ ಬಳಿ ಅಸಮಾಧಾನ ಹೊರ ಹಾಕಿದ್ದಾರೆ. ವಿರೋಧದ ನಡುವೆಯೂ ಅನ್ನಪೂರ್ಣಗೆ ಟಿಕೆಟ್ ನೀಡಲಾಗಿದೆ. ಸದ್ಯ ಎಲ್ಲರನ್ನೂ ಜತೆಯಲ್ಲಿ ಒಗ್ಗೂಡಿಸಿಕೊಂಡು ಚುನಾವಣೆ ಎದುರಿಸುವ ಸವಾಲು ಲಾಡ್ ಮುಂದಿದೆ.
ದಿವಾಕರ್ ಮನವೊಲಿಕೆ ಬಿಜೆಪಿಗೆ ಬಲ : ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿದ್ದ ಕೆ.ಎಸ್. ದಿವಾಕರ್‌ಗೆ ರಾಜ್ಯ ನಾಯಕರು ಎಚ್ಚೇತ್ತುಕೊಂಡು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ನೇಮಿಸಿ ಶಮನಗೊಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕೆಆರ್‌ಪಿಪಿಯಿಂದ ಸ್ಪರ್ಧಿಸಿ 30 ಸಾವಿರಕ್ಕೂ ಅಧಿಕ ಮತಗಳು ಪಡೆದು ಮೂರನೇ ಸ್ಥಾನ ಪಡೆದಿದ್ದರು. ಅಲ್ಲದೆ, ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ದಿವಾಕರ್ ಸ್ಥಳಿಯರ ಸಂರ್ಪಕದೊಂದಿಗೆ ವಿಶ್ವಾಸಿಯಾಗಿದ್ದಾರೆ. ಈ ಬಾರಿ ಬಂಡಾಯ ಅಭ್ಯರ್ಥಿಯಾಗಿ ದಿವಾಕರ್ ಸ್ಪರ್ಧಿಸಿದ್ದರೆ ಕಳೆದ ಬಾರಿ ಸೋಲಿನ ಅನುಕಂಪ ಹಾಗೂ ಬಿಜೆಪಿ ಅಭ್ಯರ್ಥಿ ಕ್ಷೇತ್ರದ ಹೊರಗಿನವರ ಎಂಬ ಅಭಿಪ್ರಾಯದಿಂದ ಬಿಜೆಪಿಗೆ ಖಂಡಿತ ಹಿನ್ನಡೆಯಾಗುತ್ತಿತ್ತು. ಸದ್ಯ, ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನವನ್ನು ಬಿಜೆಪಿ ತನ್ನ ಕಡೆ ವಾಲಿಸಲು ಯತ್ನಿಸಬೇಕು. ಅಲ್ಲದೆ, ಹಲವು ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಉತ್ತಮ ಮತಗಳನ್ನು ಪಡೆದುಕೊಂಡಿದ್ದಾರೆ. ಈ ಬಾರಿ ಮೈತ್ರಿ ಅಭ್ಯರ್ಥಿ ಕಣದಲ್ಲಿರುವುದಿಂದ ಜೆಡಿಎಸ್ ಸ್ಥಳಿಯ ಕಾರ್ಯಕರ್ತರನ್ನು ಮುನ್ನಲೆ ತೆಗೆದುಕೊಂಡು ಪ್ರಚಾರ ನಡೆಸಿದರೆ ಬಿಜೆಪಿ ವಿಜಯದ ಮಾಲೆ ಹಾಕಿಕೊಳ್ಳಬಹುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.