

ಮೈಸೂರು: ಹೆಣ್ಣನ್ನು ಅಪರಾಧಿಯಾಗಿಸುವ ಕ್ರಮವನ್ನು ಬದಲಿಸುವುದು ಹೇಗೆ ಎಂಬ ಚಿಂತನೆ ನಡೆಸಬೇಕಿದೆ ಎಂದು ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.
ಮೈಸೂರಿನ ಸಮತಾ ಅಧ್ಯಯನ ಕೇಂದ್ರ, ಕವಲಕ್ಕಿಯ ಕವಿ ಪ್ರಕಾಶನ ಸಹಯೋಗದಲ್ಲಿ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಬಿಹಾ ಭೂಮಿಗೌಡ ಸಂಪಾದಿಸಿರುವ ‘ಕನ್ನಡ ಮಹಿಳಾ ಕಾವ್ಯ’ ಹಾಗೂ ಸಪ್ನ ಬುಕ್ ಹೌಸ್ ಪ್ರಕಟಿಸಿರುವ ಆರ್.ಸುನಂದಮ್ಮ ಅವರ ‘ಭರತ ಕಲ್ಪ’(ಕಾದಂಬರಿ) ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ತೋರಿಕೆಗೆ ತಾಯಿ ಗುಣಗಾನ ಮಾಡುವುದು. ಪ್ರೇಮಿ-ಪತ್ನಿಯನ್ನು ವರ್ಣಿಸುವುದು. ಮಕ್ಕಳನ್ನು ಪ್ರೀತಿಸುವಂತೆ ನಾಟಕ ಮಾಡುವುದು. ಇದೆಲ್ಲ ಢಂಬಾಚಾರ ಎನಿಸುತ್ತದೆ. ತನ್ನ ಮೂಗಿನ ನೇರಕ್ಕೆ ಇರುವ ಮಗಳನ್ನು ಮಾತ್ರ ಪ್ರೀತಿಸುವುದು. ಬೇರೆ ಜಾತಿ ಹುಡುಗನನ್ನು ಪ್ರೀತಿಸಿದರೆ ಕತ್ತು ಹಿಸುಕಿ ಕೊಲ್ಲುವ ಕ್ರೌರ್ಯ. ಇದು ವಿಕೃತ ನಾಟಕ ಎನಿಸುತ್ತದೆ ಎಂದು ಬೇಸರಿಸಿದ ಅವರು, ಹೆಣ್ಣನ್ನು ಅಪರಾಧಿಯಾಗಿಸುವ ಕ್ರಮವನ್ನು ಬದಲಿಸುವುದರ ಬಗ್ಗೆ ಚಿಂತಿಸಬೇಕು ಎಂದರು.
ಜಗತ್ತಿನಲ್ಲಿ ನಾವು ಕಾಣುತ್ತಿರುವ ಕ್ರೌರ್ಯಕ್ಕೆ ಧರ್ಮಗ್ರಂಥಗಳೇ ಹೊಣೆ. ಧರ್ಮ ಗ್ರಂಥಗಳೇ ಹಿಂಸೆಗೆ ಕಾರಣವಾಗಿವೆ. ಯಾವ ಧರ್ಮಗಳು ಮನುಷ್ಯನಿಗೆ ಒಳ್ಳೆಯದನ್ನು ಮಾಡುತ್ತಿಲ್ಲ. ಧರ್ಮ ಎನ್ನುವುದು ಇನ್ನೊಬ್ಬನನ್ನು ಸಹಿಸಿಕೊಳ್ಳುವುದು. ಇದಕ್ಕೆ ವಿರುದ್ಧವಾಗಿ ಸಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃತಿಗಳ ಕುರಿತು ವಿಮರ್ಶಕಿ ಎಂ.ಉಷಾ, ಪಿ.ಭಾರತೀ ದೇವಿ ಮಾತನಾಡಿದರು. ಕವಿ ಪ್ರಕಾಶನದ ಎಚ್.ಎಸ್.ಅನುಪಮಾ, ಆರ್. ವೇದಾ, ಶಬಾನಾ ಇದ್ದರು.