

ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯ ತಾಲೂಕಿನ ಬೂದನೂರು ಬಳಿ ಸೋಮವಾರ ರಾತ್ರಿ ದುಷ್ಕರ್ಮಿಗಳು ಕಾರು ಅಡಗಟ್ಟಿ ಬೆಲ್ಲದ ವ್ಯಾಪಾರಿಯನ್ನು ಥಳಿಸಿ ಆತನ ಬಳಿಯಿದ್ದ ನಗದು ದೋಚಿದ್ದಾರೆ.
ನಗರದ ಗುತ್ತಲು ನಿವಾಸಿ ವಿನೋದ್ ಎಂಬುವರಿಂದ ಹಣ ದೋಚಲಾಗಿದೆ. ಈತ ವ್ಯಾಪಾರ ಮುಗಿಸಿಕೊಂಡು ಮದ್ದೂರಿನಿಂದ ಮಂಡ್ಯ ನಗರಕ್ಕೆ ಹಿಂದಿರುಗುವ ವೇಳೆ ಹಳೇ ಬೂದನೂರು-ಹೊಸ ಬೂದನೂರು ನಡುವಿನ ಕಾಲುವೆ ಬಳಿ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ಕಾರಿನ ಗಾಜಿನ ಮೇಲೆ ಮೊಟ್ಟೆ ಹೊಡೆದಿದ್ದಾರೆ. ಮಾತ್ರವಲ್ಲದೆ ವಾಹನ ಚಾಲನೆ ಮಾಡುತ್ತಿದ್ದ ವಿನೋದ್ ಅವರ ಕಣ್ಣಿಗೆ ಖಾರದ ಪುಡಿ ಎರಚಿದಾಗ ಕಾರು ನಿಲ್ಲಿಸಲಾಗಿದೆ. ನಂತರ ದಾಳಿ ನಡೆಸಿ ಆತನ ಬಳಿಯಿದ್ದ 55 ಸಾವಿರ ರೂ ಕಸಿದು ಪರಾರಿಯಾಗಿದ್ದಾರೆ.
ಗಾಯಗೊಂಡಿರುವ ವಿನೋದ್ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿ ತನಿಖೆ ಅರಂಭಿಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ.