

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರಾಜ್ಯದಲ್ಲಿ ಕ್ರಿಮಿನಲ್ಗಳಿಗೆ ಪೊಲೀಸರ ಮೇಲೆ ಭಯವೇ ಇಲ್ಲವಾಗಿದೆ. ಅಂಥ ಆತಂಕಕಾರಿ ಸ್ಥಿತಿ ನಿರ್ವಣವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಬೆಂಗೇರಿ ಶಾಲೆ ಮುಖ್ಯ ಶಿಕ್ಷಕಿಗೆ ನೇಹಾ, ಅಂಜಲಿ ಮಾದರಿಯಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಪತ್ರ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಪೊಲೀಸರಿಗೆ ಸ್ಥಳೀಯ ಶಾಸಕರಿಂದ ಒತ್ತಡವೂ ಹೆಚ್ಚುತ್ತಿದೆ. ಹಾಗಾಗಿ ಕ್ರಿಮಿನಲ್ಸ್ಗೆ ಪೊಲೀಸರ ಹೆದರಿಕೆಯೇ ಇಲ್ಲದಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನಾದರೂ ನಿದ್ರೆಯಿಂದ ಎಚ್ಚೆತ್ತುಕೊಳ್ಳಲಿ. ಹುಬ್ಬಳ್ಳಿ ಸೇರಿದಂತೆ ಎಲ್ಲೇ ನಡೆದ ಹತ್ಯೆ, ಬೆದರಿಕೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಜೋಶಿ ಆಗ್ರಹಿಸಿದರು.