

ಹುಬ್ಬಳ್ಳಿ : ಎಲ್ಲ ಕ್ರಿಮಿನಲ್ಗಳಿಗೆ ಕಾಂಗ್ರೆಸ್ ಸರ್ಕಾರ ಸ್ವರ್ಗವಾಗಿದೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣ ಸೇರಿದಂತೆ ರಾಜ್ಯದ ವಿವಿಧೆಡೆಯ ಕೇಸ್ಗಳನ್ನು ಹಿಂಪಡೆದಿದ್ದರಿಂದ ಕ್ರಿಮಿನಲ್ಗಳಿಗೆ ಸರ್ಕಾರ ತಮ್ಮನ್ನು ರಕ್ಷಿಸುತ್ತದೆ ಎಂಬ ಧೈರ್ಯ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆಕಳುಗಳ ಕೆಚ್ಚಲು ಕತ್ತರಿಸಿದ ಪ್ರಕರಣದ ಕುರಿತು ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಅಲ್ಪಸಂಖ್ಯಾತರ ತುಷ್ಟೀಕರಣ ನಡೆಯುತ್ತದೆ ಎಂದು ದೂರಿದರು.
ದೇಶದ್ರೋಹದ ಕೃತ್ಯಗಳಲ್ಲಿ ತೊಡಗಿದ್ದವರ ವಿರುದ್ಧ ಇದ್ದ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿದ್ದರಿಂದ ಸಮಾಜದ್ರೋಹಿ ಶಕ್ತಿಗಳಿಗೆ ಬಲ ಬಂದಿದೆ. ಸರ್ಕಾರ ಇರುವುದೇ ತಮ್ಮಂತಹ ಕ್ರಿಮಿನಲ್ಗಳನ್ನು ರಕ್ಷಿಸುವುದಕ್ಕೆ ಎಂಬ ಮನೋಭಾವ ಅವರಲ್ಲಿ ಬಂದಿದೆ ಎಂದು ವಿಶ್ಲೇಷಿಸಿದರು.
ಸರ್ಕಾರ ಗಟ್ಟಿಯಾಗಿದ್ದರೆ ಈ ರೀತಿಯ ಕೃತ್ಯಗಳು ನಡೆಯುವುದಿಲ್ಲ. ಸಮಾಜವಿರೋಧಿ ಕೃತ್ಯಗಳನ್ನು ತಡೆಯುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಮಾಯಕ ಹಸುಗಳ ಮೇಲೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸಿದರೆ ರಾಜಕೀಯ ಪ್ರೇರಿತವೆಂದು ಮುಖ್ಯಮಂತ್ರಿ ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಸುಗಳನ್ನು ನರಳುವಂತೆ ಮಾಡಿ, ಹೊಸತನ್ನು ಕೊಡಿಸುತ್ತೇನೆ ಎನ್ನುವ ಸಚಿವ ಜಮೀರ್ ಅಹ್ಮದ್ಗೆ ಬುದ್ಧಿ ಇದೆಯಾ ಎಂದು ಪ್ರಶ್ನಿಸಿದ ಸಚಿವ ಪ್ರಲ್ಹಾದ ಜೋಶಿ, ಮಾತನಾಡುವಾಗ ಅರಿವು ಇರಬೇಕು ಎಂದರು.