

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಕಾರದ (ಹುಡಾ)ವ್ಯಾಪ್ತಿಯಲ್ಲಿ ಅಕ್ರಮ ಲೇಔಟ್ ನಿರ್ಮಾಣ ಹಾಗೂ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಇಂಥ ಲೇಔಟ್ ನಿರ್ಮಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಹುಡಾ ನೂತನ ಅಧ್ಯಕ್ಷ ಶಾಕೀರ ಸನದಿ ಎಚ್ಚರಿಕೆ ನೀಡಿದರು.
ನವನಗರದ ಹುಡಾ ಕಚೇರಿಯಲ್ಲಿ ನೂತನ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಲೇಔಟ್‌ಗಳಿಂದ ಸರ್ಕಾರ ಹಾಗೂ ಬಡವರಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಜತೆಗೆ ಬಡವರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಹುಡಾ ವತಿಯಿಂದಲೇ ಉತ್ತಮ ಲೇಔಟ್ ನಿರ್ಮಿಸುವ ಯೋಚನೆ ಇದೆ ಎಂದರು.
ಹು-ಧಾ ಅವಳಿನಗರದ ಜನರು ಅಕ್ರಮ ಸಕ್ರಮ ಲೇಔಟ್ ಖರೀದಿಸಬಾರದು. ನಿವೇಶನದ ಅಗತ್ಯವಿದ್ದಲ್ಲಿ ಹುಡಾ ಸಂಪರ್ಕಿಸಿ ಉತ್ತಮ ಹಾಗೂ ನ್ಯಾಯಯುತವಾಗಿ ಸೈಟ್ ಪಡೆದುಕೊಳ್ಳಬೇಕು. ಪ್ರಾಧಿಕಾರದಿಂದ ಜಮೀನು ಖರೀದಿಸಿ ಹೊಸ ಲೇಔಟ್ ನಿರ್ಮಿಸುವುದು ಹಾಗೂ ಜಮೀನು ಮಾಲೀಕರ ಜತೆಗೆ ಜೆವಿ ಮೂಲಕ (50-50 ಅಡಿ) ಲೇಔಟ್ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಅದಕ್ಕೆ ಕನಿಷ್ಠ 50 ಎಕರೆ ಜಮೀನಿನ ಅವಶ್ಯಕತೆ ಇದ್ದು ಹುಡುಕಾಟ ನಡೆಸಲಾಗುವುದು ಎಂದರು.
ಹುಡಾ ಆಯುಕ್ತ ಸಂತೋಷ ಬಿರಾದಾರ ಮಾತನಾಡಿ, ಹುಡಾ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ನೂರು ಎಕರೆ ಅಕ್ರಮ ಲೇಔಟ್ ಗುರುತಿಸಿ ತೆರವುಗೊಳಿಸಲಾಗಿದೆ. ಮತ್ತೆ ಕೆಲವರು ಪ್ರಾಧಿಕಾರದ ಸೂಚನೆ ಮೇರೆಗೆ ಸ್ವಯಂ ತೆರುವುಗೊಳಿಸಿಕೊಂಡಿದ್ದಾರೆ. ಸಾರ್ವಜನಿಕರು ಅಕ್ರಮ-ಸಕ್ರಮ ಲೇಔಟ್ ಬಗ್ಗೆ ಮಾಹಿತಿ ನೀಡಿದಲ್ಲಿ ತೆರವುಗೊಳಿಸುವ ಕೆಲಸ ಹುಡಾ ಮಾಡಲಿದೆ. ಅಕ್ರಮ-ಸಕ್ರಮವಾಗಿ ಲೇಔಟ್ ನಿರ್ಮಿಸದಂತೆ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಈಗಾಗಲೇ ಪ್ರಾಧಿಕಾರದಿಂದ ರಾಯನಾಳ, ಸತ್ತೂರು, ಸುತಗಟ್ಟಿ, ಲಕ್ಕಮ್ಮನಹಳ್ಳಿ, ತಡಸಿನಕೊಪ್ಪ ಸೇರಿ ವಿವಿಧೆಡೆ ನಿರ್ಮಿಸಿರುವ ಲೇಔಟ್‌ನಲ್ಲಿ 800ಕ್ಕೂ ಹೆಚ್ಚು ನಿವೇಶನಗಳು ಉಳಿದುಕೊಂಡಿವೆ. ಅವುಗಳನ್ನು ಸದ್ಯದಲ್ಲಿಯೇ ಆಕ್ಷನ್ ಮೂಲಕ ಮಾರಾಟ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.
ಹುಡಾ ಮತ್ತು ಜಮೀನು ಮಾಲೀಕರ ಸಹಯೋಗದಲ್ಲಿ ಲೇಔಟ್ ನಿರ್ಮಿಸುವ ನಿಟ್ಟಿನಲ್ಲಿ ಈಗಾಗಲೇ 4-5 ರೈತರೊಂದಿಗೆ ಚರ್ಚಿಸಲಾಗಿದೆ. ಕನಿಷ್ಠ 25 ಎಕರೆ ಜಮೀನು ದೊರೆತಲ್ಲಿ ಲೇಔಟ್ ನಿರ್ಮಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗುವುದು. ಹುಡಾ ಲೇಔಟ್ ಖರೀದಿಸಿದವರಿಗೆ ಇ- ಸ್ವತ್ತು ಆಗದೇ ಇರುವ ಬಗ್ಗೆ ಹಾಗೂ ಅದರಲ್ಲಿನ ತಾಂತ್ರಿಕ ತೊಂದರೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹು-ಧಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಅಧಿಕಾರಿ ಚಂದ್ರಶೇಖರ ಮುಧೋಳ್ಕರ್ ಸುದ್ದಿಗೋಷ್ಠಿಯಲ್ಲಿದ್ದರು.