ಶುದ್ಧೀಕರಿಸಿದ ನೀರು ಬಿಡದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲು

29-kollegal-4,,,,,,
ನಗರಸಭೆ ಸದಸ್ಯೆ ಜಯಮೇರಿ ನಗರಸಭೆ ಪೌರಾಯುಕ್ತರಿಗೆ ಬರೆದಿರುವ ಪತ್ರದ ಪ್ರತಿ.
Published on

ಕೊಳ್ಳೇಗಾಲ: ಶುದ್ಧಿಕರಿಸದ ಒಳಚರಂಡಿ ಮತ್ತು ಚರಂಡಿ ಕಲುಷಿತ ನೀರನ್ನು ಕಾವೇರಿ ನದಿ ಹಾಗೂ ಕೆರೆಗೆ ಬಿಡಲಾಗುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ನಗರಸಭೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕವಾಗಿ ಕೋರ್ಟ್‌ನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇನೆಂದು ನಗರಸಭೆ ಸದಸ್ಯೆ ಜಯಮೇರಿ ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದಿದ್ದಾರೆ.

ಯುಜಿಡಿ ಸಂಸ್ಕರಣಾ ಘಟಕದಿಂದ ಒಳಚರಂಡಿ ಹಾಗು ಚರಂಡಿ ಕುಲುಷಿತ ನೀರನ್ನು ಶುದ್ಧೀಕರಿಸಿದ ಬಳಿಕ ನಿಯಮಾನುಸಾರ ವ್ಯವಸಾಯಕ್ಕೆ ಒದಗಿಸಬೇಕಿದೆ. ಆದರೆ, ನೀರು ಶುದ್ಧಿಕರಿಸುವ ಯಂತ್ರಗಳು ರಿಪೇರಿಯಾಗಿ ಕಾರ್ಯ ನಿರ್ವಹಿಸದೆ ಇದ್ದು, ಕಲುಷಿತ ನೈರ್ಮಲ್ಯದ ನೀರನ್ನು ಕುಪ್ಪಮ್ಮ ಕಾಲುವೆ ಮೂಲಕ ಕಾವೇರಿ ನದಿಗೆ ಹರಿದು ಹೋಗುತ್ತಿದೆ. 24*7ರ ಫಿಲ್ಟರ್ ನೀರಿನ ಹೆಸರಿನಲ್ಲಿ ಜನರಿಗೆ ಕಲುಷಿತ ಕುಡಿಸಿದಂತಾಗಿದೆ. ಜನರಿಗಿರುವ ಪವಿತ್ರ ಭಾವನೆಗೆ ಅವಮಾನ ಮಾಡಲಾಗಿದೆ. ರೈತರಿಗೆ ಕಲುಷಿತ ಯುಜಿಡಿ ನೀರನ್ನು ಒದಗಿಸಿದಂತಾಗಿದೆ. ಅಲ್ಲದೆ ಪಟ್ಟಣದಲ್ಲಿ ಕುರಿ, ಕೋಳಿ ಮತ್ತು ಮೀನಿನ ಅಂಗಡಿ ತ್ಯಾಜ್ಯ ಚರಂಡಿ ಸೇರುತ್ತಿದೆ. ಬಹುತೇಕ ಬಡಾವಣೆಗಳಲ್ಲಿ ಶೌಚಗೃಹ ನೀರಿನ ಸಂಪರ್ಕ ಚರಂಡಿಗೆ ಬಿಡಲಾಗಿದೆ. ಮ್ಯಾನ್‌ಹೋಲ್‌ನ ತುಂಬುವ ನೀರನ್ನು ಸಕ್ಕಿಂಗ್ ಮಷಿನ್ ಅನ್ನು ಶೇಖರಿಸಿ ದೊಡ್ಡ ಚರಂಡಿಯ ಮೂಲಕ ಬಿಡಲಾಗುತ್ತಿದೆ.

ಚಿಕ್ಕರಂಗನಾಥ ಕೆರೆ, ಕೊಂಗಳಗೆರೆ ಕೆರೆ ಮತ್ತು ಕುಪ್ಪಮ್ಮ ಕಾಲುವೆ ಮೂಲಕ ಈ ನೀರು ನದಿ ಸೇರುತ್ತಿದೆ. ಈ ನೀರನ್ನು ರೈತರು ಬಳಸಿ ರೈತರು ಬೆಳೆ ಗುಣಮಟ್ಟದ್ದಾಗಿರುತ್ತದೆಯೇ? ಈ ಆಹಾರ ಎಷ್ಟು ಸುರಕ್ಷಿತ? ನಗರಸಭೆಯ ಪೌರಾಯುಕ್ತರು, ಪರಿಸರ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಹಾಗೂ ನಗರಸಭೆ ಆಡಳಿತ ಜೀವಂತವಿದೆಯೇ? ಮಕ್ಕಳ ಹಾಗೂ ವಯಸ್ಕರ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿ ಮತ್ತು ಶುದ್ಧ ಪರಿಸರಕ್ಕಾಗಿ 1 ತಿಂಗಳ ಅವಧಿಯಲ್ಲಿ ಕೆಟ್ಟು ನಿಂತಿರುವ ಯುಜಿಡಿಯ ಸಂಸ್ಕರಣಾ ಘಟಕದ ಯಂತ್ರಗಳನ್ನು ರಿಪೇರಿ ಮಾಡಿಸಿ, ಕಲುಷಿತ ಚರಂಡಿ ನೀರು ಹಾಗೂ ಒಳಚರಂಡಿ ನೀರನ್ನು ಕಾವೇರಿ ನದಿಗೆ ಬಿಡುವ ಬದಲು ಶುದ್ಧೀಕರಿಸಿ ರೈತರ ಜಮೀನಿಗೆ ಬಿಡಬೇಕು. ಇಲ್ಲವಾದಲ್ಲಿ ರೈತ ಸಂಘ, ವಿವಿಧ ಸಂಘಟನೆ ಬೆಂಬಲದೊಂದಿಗೆ ನಗರಸಭೆ ಆಡಳಿತ ವಿರುದ್ಧ ಹೋರಾಟ ನಡೆಸಲಾಗುವುದು. ಸಾರ್ವಜನಿಕರ ಆರೋಗ್ಯ, ಜೀವ ಮತ್ತು ಜೀವನದ ಜತೆ ಚೆಲ್ಲಾಟವಾಡುತ್ತಿರುವ ನಗರಸಭೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕವಾಗಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಸದಸ್ಯೆ ಜಯಮೇರಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net