

ಹಾಸನ: ಹಾಸನ ನಗರ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಅಕ್ರಮ ಸುಂಕ ವಸೂಲಿ ಹಾಗೂ ಅವರ ಮೇಲೆ ದೌರ್ಜನ್ಯ ಪ್ರಕರಣಗಳು ಕಂಡು ಬಂದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಎಚ್ಚರಿಕೆ ನೀಡಿದರು.
ನಗರಸಭೆ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾಜಿ ಅಧ್ಯಕ್ಷ ಆರ್.ಮೋಹನ್ ಅವರ ಅಕ್ರಮ ಸುಂಕ ವಸೂಲಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಅಕ್ರಮ ಸುಂಕ ವಸೂಲಿ ಹಾಗೂ ವ್ಯಾಪಾರಿಗಳ ಮೇಲಿನ ದೌರ್ಜನ್ಯ ಸಹಿಸುವುದಿಲ್ಲ. ಅಂತಹವರ ಬಗ್ಗೆ ಮಾಹಿತಿ ಬಂದಲ್ಲಿ ತಮ್ಮ ಗಮನಕ್ಕೆ ತರಬೇಕು ಎಂದು ಹೇಳಿದರು. ಈ ವೇಳೆ ಆರ್.ಮೋಹನ್ ಮಾತನಾಡಿ, 2024 ಸೆ.30ಕ್ಕೆ ಬೀದಿಬದಿ ವ್ಯಾಪಾರಿಗಳಿಂದ ಸುಂಕ ವಸೂಲಿ ಗುತ್ತಿಗೆ ಮುಗಿದಿದೆ. ಮುಂದಿನ ಟೆಂಡರ್ ಕರೆಯುವವರೆಗೂ ಸುಂಕ ವಸೂಲಾತಿ ಮಾಡುವ ಹಾಗಿಲ್ಲ ಎಂಬ ಬಗ್ಗೆ ಈ ಹಿಂದಿನ ಸಭೆಯಲ್ಲಿ ಚರ್ಚೆ ಆಗಿದ್ದರೂ ಈವರೆಗೆ ಸುಂಕ ವಸೂಲಾತಿ ಮುಂದುವರೆದಿದೆ. ಹಣ ನೀಡದವರ ಅಂಗಡಿಗಳಲ್ಲಿನ ವಸ್ತುಗಳು, ಹಣ್ಣು-ತರಕಾರಿಗಳನ್ನು ಬೀದಿಗೆ ಎಸೆಯುವ ಮೂಲಕ ಅಮಾನವೀಯವಾಗಿ ವರ್ತನೆ ಮಾಡುತ್ತಿರುವ ಗುತ್ತಿಗೆದಾರರು ಹಬ್ಬ-ಹರಿದಿನಗಳಲ್ಲಿ ಲಕ್ಷಾಂತರ ರೂ. ಸುಂಕದ ರೂಪದಲ್ಲಿ ಪಡೆಯುತ್ತಿದ್ದಾರೆ ಎಂದರು.
ಸದಸ್ಯರಾದ ಸಂತೋಷ್ ಹಾಗೂ ರಕ್ಷಿತ್ ಮಾತನಾಡಿ, ನಗರಸಭೆ ಆವರಣದಲ್ಲಿ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳು ಸಿಬ್ಬಂದಿಗೆ ಕುಡಿಯುವ ನೀರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು. ಮತ್ತು ಶೌಚಾಲಯದ ಸಮಸ್ಯೆಯಿಂದ ಮಹಿಳೆಯರಿಗೆ, ಮಕ್ಕಳಿಗೆ ಸಮಸ್ಯೆ ಆಗುತ್ತಿದ್ದು ಕೂಡಲೇ ನಗರಸಭೆ ವತಿಯಿಂದ ಸುಸಜ್ಜಿತ ಶೌಚಾಲಯ ಹಾಗೂ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ನಗರವನ್ನೆಲ್ಲ ಸ್ವಚ್ಛ ಮಾಡುವ ನಗರಸಭೆ ಸಭಾಂಗಣದಲ್ಲೇ ಹಲವು ಸಮಸ್ಯೆಗಳಿವೆ. ಕುವೆಂಪು ಸಭಾಂಗಣದಲ್ಲಿನ ಪೀಠೋಪಕರಣಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳಬೇಕು. ಕಸ ಸಾಗಣೆ ವಾಹನಗಳು ಇಂಧನದ ಕೊರತೆ ಎಂಬ ಕಾರಣ ಹೇಳಿ ಹಲವು ಬಡಾವಣೆಗಳ ಕಸ ಸಂಗ್ರಹಿಸಿಲ್ಲ. ಈ ಬಗ್ಗೆ ನಗರಸಭೆ ಅಧ್ಯಕ್ಷರು ಗಮನಹರಿಸಬೇಕು. ಹಲವು ವಾಹನಗಳು ದುಸ್ಥಿತಿಯಲ್ಲಿದ್ದು ಅವುಗಳನ್ನು ರಿಪೇರಿ ಮಾಡಿಸಿ ಸುಸ್ಥಿತಿಯಲ್ಲಿ ಇಡಬೇಕು ಎಂದು ಸಲಹೆ ನೀಡಿದರು.
ನಗರಸಭೆಗೆ ಸೇರಿದ ಜಾಗವನ್ನು ಖಾಸಗಿ ಶಾಲೆಗಳು ಹಾಗೂ ಇನ್ನಿತರ ಸಂಘ-ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿವೆ. ಕೂಡಲೇ ಅದನ್ನು ತೆರವು ಮಾಡುವ ಕೆಲಸ ಮಾಡಬೇಕು ಎಂದು ಇತರ ಸದಸ್ಯರು ಮನವಿ ಮಾಡಿದರು. ಬಳಿಕ ರಸ್ತೆ, ಒಳಚರಂಡಿ, ಕುಡಿಯುವ ನೀರು, ವಿದ್ಯುತ್, ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದವು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲತಾದೇವಿ, ಆಯುಕ್ತ ರಮೇಶ್ ಹಾಗೂ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.